ಬೆಂಗಳೂರು: ಮೇಕೆದಾಟು (Mekedatu) ಪಾದಯಾತ್ರೆ ವೇಳೆ ಅನುಚಿತ ವರ್ತನೆ ತೋರಿದ ಬಗ್ಗೆ ಮಾಜಿ ಶಾಸಕ ಬಿ.ಆರ್. ಪಾಟೀಲ್‍ಗೆ (B.R Patil) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar)ಪತ್ರ ಬರೆದು ಕ್ಷಮೆ ಕೇಳಿದ್ದಾರೆ.
ಪತ್ರದಲ್ಲಿ ಏನಿದೆ?: ಮೇಕೆದಾಟು(Mekedatu)ಪಾದಯಾತ್ರೆ ವೇಳೆ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದ್ರೇ, ತಮ್ಮಂತಹ ಹಿರಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದನ್ನು ಕನಸು ಮನಸ್ಸಿನಲ್ಲಿ ಎಣಿಸಲು ಸಾಧ್ಯವಿಲ್ಲ. ಇಂತಹ ಘಟನೆ ನಡೆದಿರುವುದು ನನಗೆ ಅರಿವಿಲ್ಲ. ಜನರ ನೂಕು ನುಗ್ಗಲು ವೇಳೆ ಏನಾದ್ರೂ ಅಚಾತುರ್ಯ ನಡೆದಿದ್ರೆ ವಿಷಾದಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ
ತಾವು ಹಿರಿಯ ನಾಯಕರು ಮತ್ತು ಪಕ್ಷ ನಿಷ್ಠೆಗೆ ಮಾದರಿಯಾಗಿರುವವರು. ಅದಲ್ಲದೆ ನನ್ನ ಆತ್ಮೀಯ ಸ್ನೇಹಿತರು ಮತ್ತು ಹಿತೈಷಿಗಳು. ತಮ್ಮ ಬಗ್ಗೆ ನಾನು ಅಪಾರ ಗೌರವ ಮತ್ತು ಅಭಿಮಾನ ಹೊಂದಿರುವುದನ್ನು ತಾವು ಬಲ್ಲಿರಿ. ಹೀಗಾಗಿ ತಮ್ಮ ಜೊತೆಗೆ ನಾನು ಅನುಚಿತವಾಗಿ ವರ್ತಿಸಲು ಸಾಧ್ಯವೇ ಇಲ್ಲ ಎನ್ನುವ ಅರಿವು ಕೂಡಾ ತಮಗೆ ಖಂಡಿತವಾಗಿ ಇದೆ. ಹೀಗಾಗಿ ಗೊತ್ತಿಲ್ಲದೆ ಏನಾದರೂ ಅಂತಹ ಪ್ರಸಂಗ ನಡೆದಿದ್ದರೆ, ಹಿರಿಯರಾದ ತಾವು ಅದನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರಿಸಬಾರದು ಎಂದು ವಿನಂತಿಸುತ್ತೇನೆ.
ತಮಗೆ ತಿಳಿದಿರುವಂತೆ ನಾನು ಪಕ್ಷದ ಅಣತಿಯಂತೆ ಗೋವಾ ಚುನಾವಣೆಯ ಫಲಿತಾಂಶದ ನಂತರ ವಿದ್ಯಮಾನಗಳನ್ನು ನಿರ್ವಹಿಸುವ ಸಲುವಾಗಿ ಗೋವಾದಲ್ಲಿ ಇದ್ದೇನೆ. ಇಲ್ಲಿಂದ ಬಂದ ಬಳಿಕ ತಕ್ಷಣ ತಮ್ಮಲ್ಲಿ ಈ ಕುರಿತು ಮುಖತಃ ಮಾತನಾಡುತ್ತೇನೆ. ದಯವಿಟ್ಟು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬಾರದೆಂದು ಮತ್ತೊಮ್ಮೆ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ ಆರ್ ಪಾಟೀಲ್, ಆದ ಅಚಾತುರ್ಯಕ್ಕೆ ಡಿಕೆಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಟೋಪಿ ಕಿತ್ತೆಸೆದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಭವಿಷ್ಯದಲ್ಲಿ ಪಕ್ಷಕ್ಕೆ ಆಗಲಿರುವ ಹಾನಿಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿಕೊಟ್ಟಿದ್ರು. ಈ ವಿಚಾರ ರಾಹುಲ್ ಗಾಂಧಿವರೆಗೂ ಹೋಗಿತ್ತು.