ಬೆಂಗಳೂರು: ಕೇಂದ್ರ ಸರ್ಕಾರ ಅಕ್ಕಿ (Rice) ಕೊಡದ ವಿಚಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ (Congress) ಈಗ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದೆ. ಜೂನ್ 20 ರಂದು ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಪ್ರತಿಭಟನೆ (Protest) ನಡೆಸಲು ತೀರ್ಮಾನ ತೆಗೆದುಕೊಂಡಿದೆ.
ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಕಾಂಗ್ರೆಸ್ಸಿಗೆ ಬಡವರು ಮತ ಹಾಕಿದ್ದಾರೆ. ಅವರಿಗೆ ಧಿಕ್ಕಾರ ಮಾಡಲು ಬಿಜೆಪಿ (BJP) ಹೊರಟಿದೆ. ಬಡವರಿಗೆ ದ್ರೋಹ ಮಾಡಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಜೂನ್ 20 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಕೆಪಿಸಿಸಿಯಿಂದ (KPCC) ನಡೆಯುವ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಭಾಗವಹಿಸಬೇಕು. ನಮ್ಮನ್ನು ಕೇಂದ್ರ ಸರ್ಕಾರ ಹೆದರಿಸುತ್ತಿದ್ದು ಇದರ ವಿರುದ್ಧ ನಾವು ಸಿಡಿಯುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯೋಗದಿಂದ ಪರಿವರ್ತನೆ – ಅಂದು ಖೈದಿಯಾಗಿದ್ದಾತ ಈಗ ಯೋಗ ಗುರು
ಬೇರೆ ರಾಜ್ಯಗಳಲ್ಲಿ ನಾವು ಅಕ್ಕಿ ಖರೀದಿಯ ಬಗ್ಗೆ ವಿಚಾರಿಸುತ್ತಿದ್ದೇವೆ. ಪಾರದರ್ಶಕವಾಗಿ ಖರೀದಿ ಮಾಡಬೇಕಿದೆ. ಕೇಂದ್ರದ ಬಳಿ ಏಳು ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ. ನಾವು 2.80 ಲಕ್ಷ ಮೆಟ್ರಿಕ್ ಟನ್ ಕೇಳುತ್ತಿದ್ದೇವೆ. ಯೋಜನೆ ಜಾರಿಯಾಗಲು ಒಂದೆರೆಡು ದಿನಗಳು ತಡವಾಗಬಹುದು ಎಂದರು.
ಅಕ್ಕಿ ಹೊಂದಿಸಲು ತಡವಾಗಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಅನ್ನಭಾಗ್ಯ ಯೋಜನೆ ಜಾರಿಯಾಗುವುದು ತಡವಾಗಬಹುದು ಎಂಬದುನ್ನು ಡಿಕೆ ಶಿವಕುಮಾರ್ ಒಪ್ಪಿಕೊಂಡರು.