Connect with us

Belgaum

ಹಸಿರು ಟವಲ್ ಹಾಕಿದವರೆಲ್ಲಾ ರೈತರೇ? ಬಿಜೆಪಿಗೆ ಡಿಕೆಶಿ ಟಾಂಗ್

Published

on

ಬೆಳಗಾವಿ: ಹಸಿರು ಟವಲ್ ಹಾಕಿದವರೆಲ್ಲಾ ರೈತರೇ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿ ಬಿಜೆಪಿಯ ರೈತ ಪ್ರತಿಭಟನೆಗೆ ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯುವುದಕ್ಕೆ ಅಧಿವೇಶನದಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ರಾಜ್ಯದ ಜನತೆಯ ಹಿತಾಸಕ್ತಿಗಾಗಿ ರಾಜಕಾರಣ ಬಿಟ್ಟು ಎಲ್ಲರು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಬಿಜೆಪಿ ರಾಜಕಾರಣ ಬಿಟ್ಟು ಜನಪರವಾಗಿ ಚರ್ಚಿಸಲಿ ಆಗ ಸರ್ಕಾರ ಸಮರ್ಪಕವಾಗಿ ಉತ್ತರ ಕೊಡುತ್ತದೆ ಎಂದು ಹೇಳಿದರು.

ನಂತರ ಮೈತ್ರಿ ಸರ್ಕಾರ ಬಂದ ದಿನವೇ ರೈತರ ಸಾಲ ಮನ್ನಾ ಮಾಡಿ ಅಂತ ಯಡಿಯೂರಪ್ಪನವರು ಪಟ್ಟು ಹಿಡಿದಿದ್ದರು. ಹಸಿರು ಟವಲ್ ಹಾಕಿದವರೆಲ್ಲಾ ರೈತರೇ? ಬಿಜೆಪಿ ಅವರೇನು ಹೊಲ ಉಳುಮೆ ಮಾಡಿದ್ದಾರಾ? ಸಿಎಂ ಕುಮಾರಸ್ವಾಮಿಯವರು ಗದ್ದೆ ಕಟಾವು ಮಾಡಿರೋದು ರಾಜಕಾರಣಕ್ಕೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ರೈತರ ಬಗ್ಗೆ ಕಾಳಜಿ ಹೊಂದಿರುವವರು. ಅವರು ರೈತರ ಕುಟುಂಬದಿಂದ ಬಂದವರು. ಬಿಜೆಪಿ ಮಾತು ಮಾತಿಗೆ ನಾವು ರೈತರ ಪರ ಇದ್ದೇವೆ ಎನ್ನುತ್ತಾರೆ. ಎಷ್ಟು ಬಿಜೆಪಿ ನಾಯಕರು ಹೊಲ ಉಳುಮೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಕೆಡವೋಕೆ ಡಿಕೆಶಿ, ಸಿದ್ದರಾಮಯ್ಯ ಸಾಕು ಎಂಬ ಬಿಎಸ್‍ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಈ ರೀತಿ ಹೇಳಿದ್ದಾರ ಎಂದು ಆಶ್ಚರ್ಯಪಟ್ಟರು. ಅಲ್ಲದೇ ಈ ಬಗ್ಗೆ ಅಧಿವೇಶನ ಮುಗಿಯೋ ಒಳಗೆ ಬಿಎಸ್‍ವೈಗೆ ತಕ್ಕ ಉತ್ತರ ಕೊಡ್ತೇನೆ. ಸಚಿವ ಸಂಪುಟ ವಿಸ್ತರಣೆಯ ದಿನ ಸರ್ಕಾರ ಪತನವಾಗಲಿದೆ ಎಂಬ ಅಶೋಕ್ ಹೇಳಿಕೆಗೆ, ಅಶೋಕ್ ರಾಜಕಾರಣ ಬಿಟ್ಟು ಭವಿಷ್ಯ ಹೇಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬಿಟ್ಟು ಎಲ್ಲರೂ ಕೂಡ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ನಿಮಿತ್ತ ಹೋಗಿದ್ದಾರೆ ಹಾಗೂ ದಿನೇಶ್ ಗುಂಡೂರಾವ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನುಳಿದ ಎಲ್ಲಾ ಶಾಸಕರು ಕೂಡ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *