ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಅಭಿವೃದ್ಧಿ ಕೆಲಸ ಮಾಡಲು ಬಿಡಿ. ಕೇವಲ ವಿವಾದವನ್ನೇ ಜೀವಂತ ಇಡುವ ಪ್ರಯತ್ನ ಮಾಡಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಜಾರಕಿಹೊಳಿ ಬ್ರದರ್ಸ್ ಪರ ಬ್ಯಾಟ್ ಬೀಸಿದ ಸಚಿವರು, ಜಾರಕಿಹೊಳಿ ಸಹೋದರರ ಜೊತೆ ಕೇವಲ 10 ರಿಂದ 12 ಶಾಸಕರಿಲ್ಲ. ನಾನೂ ಸೇರಿದಂತೆ ಕಾಂಗ್ರೆಸ್ಸಿನ 78 ಶಾಸಕರು ಅವರ ಜೊತೆ ಇದ್ದೇವೆ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದ ಕಾಲುವೆಗೆ ಕನ್ನ ಹಾಕಿದ್ದರಿಂದ ಹಾಗೂ ಕಾರ್ಮಿಕ ಮುಷ್ಕರದಿಂದಾಗಿ ರಾಯಚೂರು ಕೊನೆಯ ಭಾಗದ ಜಮೀನುಗಳಿಗೆ ನೀರಿನ ಕೊರತೆ ಎದುರಾಗಿದೆ. ಈ ಕುರಿತಾಗಿ ಚರ್ಚೆ ನಡೆಸಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದ ನಿಯೋಗವು ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ.
ಕಾಲುವೆಗೆ ಕನ್ನ ಹಾಕುವುದನ್ನು ನಿಲ್ಲಿಸಬೇಕು ಹಾಗೂ ಕೊನೆಯ ಭಾಗದ ರೈತರ ಹಿತ ಕಾಪಾಡಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು. ಈ ವೇಳೆ ಸಂಸದ ಬಿ.ವಿ.ನಾಯಕ್, ಶಾಸಕರಾದ ರಾಜಾ ವೆಂಕಟಪ್ಪ ನಾಯಕ್ ಹಾಗೂ ಬಸನಗೌಡ ಉಪಸ್ಥಿತರಿದ್ದರು. ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡವನ್ನು ಕಳಿಸಿಕೊಡುತ್ತೇನೆ. ಶನಿವಾರ ಅಥವಾ ಭಾನುವಾರ ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv