ಬಳ್ಳಾರಿ: ಮಾಜಿ ಡಿಸಿಎಂ ಆರ್.ಅಶೋಕ್ ನಮ್ಮ ಬದ್ರರ್. ಅವರಿಗೆ ಅಧಿಕಾರ ಬೇಕು ಅಂದ್ರೆ ಕಾಂಗ್ರೆಸ್-ಜೆಡಿಎಸ್ ಸಿದ್ಧಾಂತಗಳನ್ನ ಒಪ್ಪಿಕೊಂಡು ನಮ್ಮ ಪಕ್ಷಕ್ಕೆ ಬರಲಿ. ಆಗ ನಾವೇ ಅಧಿಕಾರ ಕೊಡಿಸುತ್ತೇವೆ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರಿಗೆ ಅಧಿಕಾರ ಬೇಕು, ರಾಜಕೀಯದಲ್ಲಿ ಬೆಳೆಯಬೇಕು ಅಂತ ಆಸೆ ಇದ್ದರೆ ನಮ್ಮ ಪಕ್ಷಕ್ಕೆ ಬರಲಿ. ಇಲ್ಲವೇ ಬಿಜೆಪಿಯಲ್ಲಿ ಬೆಳೆಯುವುದಾದರೆ ಬೆಳೆಯಲಿ. ಅವರು ಎಲ್ಲೆ ಬೆಳೆದರೂ ನಮಗೆ ಸಂತೋಷ ಎಂದು ಹೇಳಿದರು.
Advertisement
Advertisement
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಹೊಂದಾಣಿಕೆ ರಾಜಕಾರಣಕ್ಕೆ ನಾನು ಒಪ್ಪಲಿಲ್ಲ. ಇದಕ್ಕೆ ಸಾಕ್ಷಿ ಬೇಕು ಎನ್ನುವುದಾದರೆ ಕಳೆದ ಚುನಾವಣೆಯಲ್ಲಿನ ಫೋಟೋಗಳನ್ನು ಒಮ್ಮೆ ಆರ್.ಅಶೋಕ್ ನೋಡಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
Advertisement
ಆರ್.ಅಶೋಕ್ ಹೇಳಿದ್ದೇನು?:
ಬೆಂಗಳೂರಿನಲ್ಲಿ ಇಂದು ನಡೆದ ಮಾಧ್ಯಮ ಸಂವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿದ ಆರ್.ಅಶೋಕ್ ಅವರು, ಡಿಸೆಂಬರ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಯಿಂದಾಗಿ ಮುಂದೆ ಹಾಕಲಾಗಿದೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದ್ದು, ರಾಜ್ಯಾಧ್ಯಕ್ಷ ಸ್ಥಾನವನ್ನು ಕೂಡ ಕೊಡುತ್ತದೆ. ಈಗಲೇ ಬೇಕು ಅಂತ ಕಾದು ಕುಳಿತಿಲ್ಲ. ಈಗ ಟವೆಲ್ ಹೆಗಲ ಮೇಲೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ರಾಜ್ಯಾಧ್ಯಕ್ಷ ಕುರ್ಚಿ ಮೇಲೆ ಟವೆಲ್ ಹಾಕಿಕೊಂಡು ಕುಳಿತಿಲ್ಲ. ನಾನು ಬೆಂಗಳೂರಿಗೆ ಸೀಮಿತ ಅಲ್ಲ ಎಂದು ತಿಳಿದರು.
Advertisement
ನಾನು ಹಾಗೂ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ ಸಚಿವ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎಲ್ಲಿಯವರೆಗೂ ಇಬ್ಬರು ನಾಯಕರು ಇರುತ್ತಾರೋ ಅಲ್ಲಿಯವರೆಗೂ ನನಗೆ ಅವಕಾಶ ಸಿಗಲ್ಲ. ಅವರಿಬ್ಬರೂ ಬದಿಗೆ ಸರಿದರೆ ಮಾತ್ರ ನನಗೆ ಬೆಳೆಯಲು ಅವಕಾಶವಾಗುತ್ತದೆ. ಆದರೆ ಅವರಿಗೆ ಅವಕಾಶ ಮಾಡಿಕೊಡಲು ನಾನು ಸನ್ಯಾಸಿಯಲ್ಲ. ನಾನು ಸನ್ಯಾಸ ಸ್ವೀಕಾರ ಮಾಡಿಲ್ಲ. ಇಲ್ಲೇ ಇದ್ದು ರಾಜಕಾರಣ ಮಾಡುತ್ತೇನೆ. ನನಗೂ ಬೆಳೆಯಬೇಕೆಂಬ ಆಸೆ ಹಾಗೂ ಕನಸು ಇದೆ. ಬಿಜೆಪಿಯಲ್ಲಿ ನಾನು ಬೆಳೆದೇ ಬೆಳೆಯುತ್ತೇನೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆಗೂ ಸಚಿವ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ನಾನು ಎಚ್.ಡಿ.ದೇವೇಗೌಡ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು.