BelgaumLatestLeading NewsMain Post

ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ

ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ನಾನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು. ಅವರು ಏನು ಮಾಡುತ್ತಾರೋ ಮಾಡಲಿ. ಈ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದ್ದು. ಸರ್ಕಾರ ಕಳ್ಳರಂತೆ ವರ್ತಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದನದಲ್ಲಿ ಸಮಯಾವಕಾಶ ಇದ್ದರೂ ಕಾಯಲಿಲ್ಲ. ಕಂದಾಯ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಅವರ ಮಾತು ಮುಗಿಸಿ, ನಂತರ ನಮ್ಮ ಸಮ್ಮುಖದಲ್ಲೇ ಮಂಡನೆ ಮಾಡಬಹುದಿತ್ತು. ನಾವು ಕೂಡ ಪ್ರಸ್ತಾವನೆ ಸಂದರ್ಭದಲ್ಲೇ ಇದನ್ನು ಆಕ್ಷೇಪಿಸಲು ಸಿದ್ಧರಿದ್ದೆವು. ಸರ್ಕಾರ ಮಸೂದೆ ಮಂಡಿಸಿ ನಂತರ ಮತಕ್ಕೆ ಹಾಕಲು ಅವಕಾಶ ಮಾಡಿ ಕೊಡಬೇಕಿತ್ತು. ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಸ್ಪೀಕರ್ ಅವರು ರಾಜಕೀಯ ಪಕ್ಷದ ಸದಸ್ಯರಂತೆ ನಡೆದುಕೊಂಡಿದ್ದಾರೆ. ಅವರು ಕಾನೂನಿನ ಪ್ರಕಾರವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

ನಾವು ಯಾರನ್ನೂ ನಂಬಲ್ಲ: ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜೆಡಿಎಸ್‌ಗೆ ಬಿಟ್ಟ ವಿಚಾರ. ಗೋಹತ್ಯೆ ನಿಷೇಧ ಮಸೂದೆ ಮಂಡನೆ ಸಮಯದಲ್ಲಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗಲೂ ಅವರು ವಿರೋಧಿಸುತ್ತೇವೆ ಎಂದು ಹೇಳಿ, ನಂತರ ಹಿಂದೆ ಸರಿಯುತ್ತಾರೆ. ನಾವು ಇಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಇದು ನಮ್ಮ ಅನುಭವ. ನಮಗೆ ಬಹುಮತ ಇದೆಯೋ, ಇಲ್ಲವೋ ಬೇರೆ ವಿಚಾರ. ಆದರೆ ಈ ಮಸೂದೆ ಸಂವಿಧಾನ ವಿರುದ್ಧವಾಗಿದೆ. ಈ ಮಸೂದೆಯಲ್ಲಿ ಶಿಕ್ಷಣ ಸಂಸ್ಥೆಗಳು ಉಚಿತ ಶಿಕ್ಷಣ ನೀಡುವ ಆಮಿಷ ನೀಡಲಾಗುತ್ತಿದೆ ಎಂಬ ಅಸಂಬದ್ಧ ಅಂಶಗಳಿವೆ ಎಂದರು.

ಒಂದು ವರ್ಗ ಗುರಿಯಾಗಿಸಲು ಮಸೂದೆ: ಮತಾಂತರ ನಿಷೇಧ ಹಾಗೂ ಲವ್ ಜಿಹಾದ್ ಅನ್ನು ಒಂದೇ ಮಸೂದೆಯಲ್ಲಿ ತರಲಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮದುವೆಯು ನಂಬಿಕೆ, ಪರಸ್ಪರ ಒಪ್ಪಿಗೆ ಹಾಗೂ ಪ್ರೀತಿಯ ಸಂಬಂಧದ ಆಧಾರದ ಮೇಲೆ ನಡೆಯುತ್ತದೆ. ಮದುವೆಯನ್ನು ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಮದುವೆಯನ್ನು ಅವರು ಅಸಿಂಧು ಮಾಡಲು ಹೇಗೆ ಸಾಧ್ಯ? ಸಂವಿಧಾನದ 21 ನೇ ಪರಿಚ್ಛೇದ ಏನು ಹೇಳುತ್ತದೆ? ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಏನು? ಮತಾಂತರ ವಿಚಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಇದು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾದುದಲ್ಲ. ಎಲ್ಲ ಧರ್ಮಕ್ಕೆ ಸಂಬಂಧಿಸಿದ್ದು, ಒಂದು ವರ್ಗವನ್ನು ಗುರಿಯಾಗಿಸಲು ಹಾಗೂ ಶೋಷಣೆ ಮಾಡಲು ಈ ಮಸೂದೆ ತರಲಾಗಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತಾಂತರಗೊಂಡಾಗ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಮತಾಂತರ ನಡೆಯಿತು. ಇದು ಭಾರತದ ಇತಿಹಾಸ. ರಾಜ್ಯದಲ್ಲಿ ಅನೇಕ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಕಾಲೇಜು ಹಾಗೂ ಶಾಲೆಗಳು ಇವೆ. ಆಸ್ಪತ್ರೆಗಳು, ಧಾರ್ಮಿಕ ಸಂಸ್ಥೆಗಳಿವೆ. ಆದರೂ ಸಚಿವರ ಮಕ್ಕಳು ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಈಗಲೂ ಕೇಂದ್ರದ ಹಲವು ಸಚಿವರ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಈ ಮಸೂದೆ ರಾಜ್ಯದಲ್ಲಿ ಮುಂದೆ ಬರಬಹುದಾದ ಬಂಡವಾಳ ಹೂಡಿಕೆ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಹೋರಾಡುತ್ತದೆ. ನಾವು ಜನರ ಮುಂದೆ ಹೋಗುತ್ತೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಮಸೂದೆಯನ್ನು ಹಿಂಪಡೆಯಲಿದೆ ಎಂದರು.

ತಹಶೀಲ್ದಾರ್‌ ವರ್ಗಾವಣೆ ಏಕೆ?: ಚಿತ್ರದುರ್ಗದಲ್ಲಿ ಒಂದೇ ಒಂದು ಬಲವಂತದ ಮತಾಂತರ ಆಗಿಲ್ಲ ಎಂದು ವರದಿ ನೀಡಿರುವ ತಹಶೀಲ್ದಾರರನ್ನು ವರ್ಗಾವಣೆ ಮಾಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಶಾಸಕರೊಬ್ಬರು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಅವರ ತಾಯಿ ವಿಚಾರದಲ್ಲಿ ಏನಾಗಿದೆಯೋ ಅದು ಅವರ ವೈಯಕ್ತಿಕ ವಿಚಾರ. ಆದರೆ ಚಿತ್ರದುರ್ಗ ತಹಶೀಲ್ದಾರ್ ಅವರು ವರದಿ ನೀಡಿದಾಗ ವರ್ಗಾವಣೆ ಮಾಡಿರುವುದೇಕೆ? ಕೇವಲ ಇದೊಂದೇ ಅಲ್ಲ, ಶಿಕ್ಷೆ, ಸಾಕ್ಷ್ಯಾಧಾರ ಸೇರಿದಂತೆ ಅನೇಕ ವಿಚಾರಗಳು ಇದರಲ್ಲಿ ಅಡಗಿವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

ಮತಾಂತರ ಆಗುವ ಮುನ್ನ ಅಥವಾ ನಂತರ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕು ಎಂಬ ಅಂಶವಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರ ಆಗಲು ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಹಾಕಬೇಕಂತೆ. ಇದು ಈ ದೇಶದಲ್ಲಿ ಸಾಧ್ಯವೇ? ಈ ದೇಶದ ಅನೇಕ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ವಿದೇಶದಿಂದ ಬಂದ ಅನೇಕರು ಭಜನೆ ಮಾಡುತ್ತಾರೆ. ಇದನ್ನು ತಡೆಯಲು ಸಾಧ್ಯವೇ? ಇದು ಬಲವಂತದಿಂದ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

Leave a Reply

Your email address will not be published.

Back to top button