– ರಾಜಣ್ಣ ಅವರ ಮನೆಗೆ ಸಿಎಂ ಊಟಕ್ಕೆ ಹೋಗಿದ್ದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾನು ಹೋಗಿದ್ದು ಬೀಗತನ ಅಲ್ಲವೇ ಎಂದ ಡಿಸಿಎಂ
ನವದೆಹಲಿ: ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ಸರ್ವಪಕ್ಷಗಳ ಸಭೆಯ ಬಗ್ಗೆ ಕೇಳಿದಾಗ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರಿಗೆ ಪರಿಶೀಲನಾ ಸಭೆ ಇರುವ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಗೆ ಸಂಸತ್‌ನಲ್ಲಿ ಬಿಲ್ ಮಂಡನೆ ಮಾಡಬೇಕಾದ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಾನು ಪ್ರಹ್ಲಾದ್ ಜೋಶಿ ಅವರ ಬಳಿ ಮಾತನಾಡಿದೆ. ಆಗ ಅವರು ಪ್ರಧಾನಿಯವರು ಭಾಗವಹಿಸುವ ಕಾರಣಕ್ಕೆ ಆಗುವುದಿಲ್ಲ ಎಂದಿದ್ದಾರೆ ಎಂದರು. ಇದನ್ನೂ ಓದಿ: ಚಳಿಗಾಲದ ಅಧಿವೇಶನ; ಸಿಎಂ ಕರೆದ ಸಭೆಗೆ ಬರೋದು ಅಸಾಧ್ಯ – ಜೋಶಿ
ವಿರೋಧ ಪಕ್ಷದ ನಾಯಕರು, ಸಂಸದರು, ಕೇಂದ್ರ ಸಚಿವರು ಸಭೆಯನ್ನು ಒಟ್ಟಿಗೆ ಮಾಡಬೇಕು. ಏಕೆಂದರೆ ರಾಜ್ಯದ ಹಿತಕ್ಕೆ ಒಂದು ದನಿಯಾಗಿ ಹೋರಾಟ ಮಾಡಬೇಕು. ಅದಕ್ಕಾಗಿ ಈ ತಯಾರಿ ಎಂದು ಹೇಳಿದರು.
ಮುಂದಿನ ಸಭೆಯಲ್ಲಿ ನಮ್ಮ ಸಂಸದರು ಕೈಗೆತ್ತಿಕೊಳ್ಳಬೇಕಾದ ವಿಚಾರಗಳ ಬಗ್ಗೆ ತಿಳಿಸಲಾಗುವುದು. ಯಾರು ನೇತೃತ್ವ ವಹಿಸಬೇಕು ಎಂಬುದು ಮುಖ್ಯ ಡಿಕೆಶಿ ಎಂದರು. ಸಿದ್ದರಾಮಯ್ಯ ಅವರು ತೊಟ್ಟಿದ್ದ ವಾಚ್‌ನ ಬೆಲೆ 43 ಲಕ್ಷ ಎಂದು ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, ಯಾರು ಹೇಳಿದ್ದು ಆ ವಾಚಿನ ಬೆಲೆ 43 ಲಕ್ಷ ಎಂದು. ನಾನು 7-8 ವರ್ಷದ ಹಿಂದೆ ತೆಗೆದುಕೊಂಡಾಗ 24 ಲಕ್ಷದಷ್ಟಿತ್ತು. ಅದು ಹೇಗೆ 43 ಲಕ್ಷವಾಗುತ್ತದೆ. ಉಪಾಹಾರ ಸಭೆಯ ದಿನ ನಾವಿಬ್ಬರು ಕಾಕತಾಳೀಯವಾಗಿ ಒಂದೇ ಕಂಪನಿಯ ವಾಚ್ ಧರಿಸಿದ್ದೇವೆ ಎಂದು ಆನಂತರ ತಿಳಿಯಿತು ಎಂದರು.
ರಾಜಣ್ಣ ಅವರ ಮನೆಗೆ ಸಿಎಂ ಊಟಕ್ಕೆ ಹೋಗಿದ್ದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾನು ಹೋಗಿದ್ದು ಬೀಗತನ ಅಲ್ಲವೇ? ಬ್ರೇಕ್‌ಫಾಸ್ಟ್ ಮೀಟಿಂಗ್ ಅನ್ನು ಬೀಗತನ ಎಂದು ಕೆ.ಎನ್.ರಾಜಣ್ಣ ಅವರು ಕರೆದಿರುವ ಬಗ್ಗೆ ಕೇಳಿದಾಗ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದರು. ನಾನು ಅವರ ಹುಟ್ಟುಹಬ್ಬದ ದಿನ ಹೋಗಿದ್ದೆ. ಹಾಗಾದರೆ ನಮ್ಮದೂ ಬೀಗತನ ತಾನೇ ಎಂದು ತಿವಿದರು.
ಈಗ ಸರ್ಕಾರದಲ್ಲಿ ಗೊಂದಲ ಪರಿಹಾರವಾಯಿತೆ ಎಂಬ ಪ್ರಶ್ನೆಗೆ, ಗೊಂದಲವೇ ಇರಲಿಲ್ಲ. ನೀವೇ ಗೊಂದಲ ಸೃಷ್ಟಿಸಿದವರು ಎಂದರು. ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, ಇದರ ಬಗ್ಗೆ ಮುಖ್ಯಮಂತ್ರಿಯವರ ಬಳಿ ವಿಚಾರಿಸಿ ಎಂದರು. ಇದನ್ನೂ ಓದಿ: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ
ಮಂಗಳೂರಿನಲ್ಲಿ ಅಭಿಮಾನಿಗಳು ಕೂಗು ಹಾಕಿರುವ ಬಗ್ಗೆ ಕೇಳಿದಾಗ, ಇದು ಕಳೆದ 10 ವರ್ಷಗಳಿಂದ ನಡೆಯುತ್ತಿದ್ದು, ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಜೈಲಿಂದ ಆಚೆ ಬಂದಾಗಲೂ ಜನ ನನ್ನ ಬಗ್ಗೆ ಕಾಳಜಿ ತೋರಿದ್ದರು. ಜನರ ಮಾತನ್ನು ನಿಯಂತ್ರಿಸಲು ಆಗುವುದಿಲ್ಲ. ಆದರೆ, ನಮ್ಮೆಲ್ಲರಿಗೂ ಶಿಸ್ತು ಬಹಳ ಮುಖ್ಯ. ಶಿಸ್ತು ಇಲ್ಲದೆ ಯಾವುದೇ ಪಕ್ಷದಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.


