ನವದೆಹಲಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬಂದೀಖಾನೆ ಸಚಿವರಾಗಿ ಮಂತ್ರಿಗಿರಿ ಶುರುಮಾಡಿದ್ದವರು, ಆದರೆ ಈಗ ಅವರೇ ಜೈಲು ಸೇರಿದ್ದಾರೆ. ದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆಶಿ ರಾತ್ರಿ ಕಳೆದಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಅನಾರೋಗ್ಯದಿಂದ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿದ್ದ ಡಿಕೆಶಿ ಅವರನ್ನು ಗುರುವಾರ ವೈದ್ಯಕೀಯ ವರದಿ ಬಳಿಕ ತಿಹಾರ್ ಜೈಲಿಗೆ ಕರೆದುಕೊಂಡು ಹೋಗಲಾಯಿತು. ಇಡಿ ಕೋರ್ಟಿನಲ್ಲಿ ನಾಲ್ಕನೇ ದಿನವಾದ ಗುರುವಾರವೂ ಜಾಮೀನು ಅರ್ಜಿ ಪರ-ವಿರುದ್ಧ ವಾದ-ಪ್ರತಿವಾದ ನಡೆದಿದ್ದು, ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಶನಿವಾರದವರೆಗೂ ಡಿಕೆಶಿ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ಈ ಮೂಲಕ ಡಿಕೆಶಿ ಅವರು ತಿಹಾರ್ ಜೈಲು ಸೇರಿದ ಕರ್ನಾಟಕದ ಮೊದಲ ಮಾಜಿ ಮಂತ್ರಿ ಆಗಿದ್ದಾರೆ.
ಒಂದು ವೇಳೆ ಶನಿವಾರ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಅಕ್ಟೋಬರ್ 1ರವರೆಗೆ ತಿಹಾರ್ ಕಾರಾಗೃಹವೇ ಟ್ರಬಲ್ ಶೂಟರ್ ಗೆ ಮನೆ. ಜಗತ್ತಿನ ಏಳನೇ ಅತೀ ದೊಡ್ಡ ಜೈಲಾಗಿರುವ ತಿಹಾರ್ ನ ಬ್ಯಾರಕ್ ಸಂಖ್ಯೆ 7ರ ಸೆಲ್ ನಂಬರ್ 2ರಲ್ಲಿ ಡಿಕೆ ಶಿವಕುಮಾರ್ ಅವರನ್ನು ಇರಿಸಲಾಗಿದೆ. ಆರ್ಥಿಕ ಅಪರಾಧಗಳ ಪ್ರಕರಣದಲ್ಲಿ ಬಂಧಿತರಾಗಿರುವ ವಿಚಾರಣಾಧೀನ ಕೈದಿಗಳನ್ನ ಇದೇ ಸೆಲ್‍ನಲ್ಲಿ ಇರಿಸಲಾಗುತ್ತದೆ. ಇದೀಗ ಇದೇ ಸೆಲ್‍ನಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕೂಡ ವಿಚಾರಣಾಧೀನ ಕೈದಿಯಾಗಿದ್ದಾರೆ.
ತಿಹಾರ್ ಜೈಲಿನಲ್ಲಿ ಡಿಕೆಶಿ ಅವರು ಗುರುವಾರ ರಾತ್ರಿ 9 ಗಂಟೆಗೆ ಜೈಲೂಟ ಮಾಡಿದ್ದರು. ರೋಟಿ ದಾಲ್, ಅನ್ನ ಸಬ್ಜಿಯನ್ನು ಊಟ ಮಾಡಿದ್ದರು. ಡಿಕೆಶಿ ಅವರಿಗೆಂದೇ ನೀಡಿದ್ದ ಜೈಲಿನ ತಟ್ಟೆಯಲ್ಲೇ ಮಾಜಿ ಸಚಿವರು ಊಟ ಸವಿದರು. ರಾತ್ರಿ ಬಹುಹೊತ್ತು ನಿದ್ದೆಗೆ ಜಾರದ ಅವರು ತುಂಬಾ ಚಡಪಡಿಕೆಯಿಂದ ದುಃಖದ ಛಾಯೆಯಲ್ಲಿದ್ದರು. ಡಿಕೆಶಿ ಅವರಿಗೆ ಜೈಲಿನಲ್ಲಿ ಕಾಟ್, ದಿಂಬು ಹಾಸಿಗೆಯನ್ನು ಜೈಲು ಸಿಬ್ಬಂದಿ ಕೊಟ್ಟಿದ್ದರು. ಅದರಲ್ಲೇ ಡಿಕೆಶಿ ನಿದ್ದೆ ಮಾಡಿದರು.
ಇಂದು ಬೆಳಗ್ಗೆ ಎದ್ದ ನಂತರ ಜೈಲು ಸಿಬ್ಬಂದಿ ಅವರಿಗೆ ಟೀ, ಬಿಸ್ಕೆಟ್ ನೀಡಿದ್ದರು. ಜೊತೆಗೆ ಓದಲು ಇಂಗ್ಲೀಷ್ ಪೇಪರ್ ಬೇಕು ಎಂದು ಸಿಬ್ಬಂದಿ ಬಳಿ ಹೇಳಿ ತರಿಸಿಕೊಂಡರು. ವಿಚಾರಣಾಧೀನ ಕೈದಿಯಾಗಿದ್ದರಿಂದ ವಾಕಿಂಗ್, ಎಕ್ಸರ್ ಸೈಜ್, ಲೈಬ್ರರಿ ಬಳಸಲು ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದಾರೆ.