Connect with us

Bengaluru City

ಡಿಕೆಶಿ ಬಿಡುಗಡೆ : ಪ್ರಯಾಣಿಕರಿಗೆ 4 ಕಿಲೋ ಮೀಟರ್ ಉಚಿತ ಪ್ರಯಾಣದ ಆಫರ್ ಕೊಟ್ಟ ಆಟೋ ಚಾಲಕ

Published

on

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಡಿಕೆಶಿ ಅವರ ಕಟ್ಟಾ ಅಭಿನಮಾನಿಯಾಗಿರುವ ಬೆಂಗಳೂರಿನ ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ 4 ಕಿಲೋ ಮೀಟರ್ ಉಚಿತ ಪ್ರಯಾಣದ ಆಫರ್ ಕೊಟ್ಟಿದ್ದಾರೆ.

ಹೆಬ್ಬಾಳದ ಭದ್ರಪ್ಪ ಲೇಔಟ್ ನಿವಾಸಿ ದಿಲೀಪ್ ಪ್ರಯಾಣಿಕರಿಗೆ ಆಫರ್ ಕೊಟ್ಟಿರುವ ಆಟೋ ಚಾಲಕ. ದಿಲೀಪ್ ಅವರು ಕಳೆದ 4 ವರ್ಷದಿಂದ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ. ಮೊದಲಿನಿಂದಲೂ ಡಿಕೆಶಿ ಅವರನ್ನು ಕಂಡರೆ ದೀಲಿಪ್‍ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಹೀಗಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಡಿಕೆಶಿಯನ್ನು ಬಂಧಿಸಿದಾಗ ದಿಲೀಪ್ ಬಹಳ ಬೇಸರಪಟ್ಟಿದ್ದರು. ಅವರು ಬೇಗ ಬಿಡುಗಡೆಯಾಗಲಿ ಎಂದು ನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಬುಧವಾರ ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆ ಖುಷಿಯಲ್ಲಿರುವ ದಿಲೀಪ್ ಅವರು, ತಮ್ಮ ಆಟೋದಲ್ಲಿ ಪ್ರಯಾಣಿಕರಿಗೆ 4 ಕಿಲೋ ಮೀಟರ್ ಉಚಿತ ಪ್ರಯಾಣದ ಆಫರ್ ಕೊಟ್ಟಿದ್ದಾರೆ. ಅಲ್ಲದೆ ಶಿವಕುಮಾರ್ ಬಿಡುಗಡೆ ಹಿನ್ನೆಲೆಯಲ್ಲಿ 4 ಕಿಲೋ ಮೀಟರ್ ಉಚಿತ ಪ್ರಯಾಣ ಅಂತ ಆಟೋ ಹಿಂದೆ ಬ್ಯಾನರ್ ಕೂಡ ಹಾಕಿದ್ದಾರೆ. ಈ ಮೂಲಕ ಡಿಕೆಶಿ ಬಿಡುಗಡೆಯಾದ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ.

ಇತ್ತ ಶಿವಮೊಗ್ಗದಲ್ಲಿ ಅಭಿಮಾನಿಗಳು ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಡಿಕೆಶಿ ಬಿಡುಗಡೆಯನ್ನು ಸಂಭ್ರಮಿಸಿದರು. ಒಂದು ತಿಂಗಳಿಗೂ ಅಧಿಕ ಕಾಲ ಇಡಿ ಬಂಧನದ ಬಳಿಕ ತಿಹಾರ್ ಜೈಲುವಾಸದಲ್ಲಿದ್ದ ಡಿಕೆ ಜೈಲಿನಿಂದ ಹೊರ ಬಂದಿದ್ದು, ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವಿಶೇಷ ಪೂಜೆಯಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಡಿಕೆಶಿ ಅವರಿಗೆ ಆರೋಗ್ಯ, ಆಯುಷ್ಯ ಪ್ರಾಪ್ತಿಗೆ ಅಭಿಮಾನಿಗಳು ಪ್ರಾರ್ಥಿಸಿ, ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಜೈಕಾರ ಹಾಕಿ ಸಂತೋಷಪಟ್ಟರು.

Click to comment

Leave a Reply

Your email address will not be published. Required fields are marked *