ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ಮನವೊಲಿಸಲು ಸತತ ಪ್ರಯತ್ನ ಪಟ್ಟಿದ್ದು, ಕೊನೆಗೆ ಎಲ್ಲವೂ ವಿಫಲವಾಗಿ ಇಂದು ಸದನಕ್ಕೆ ಆಗಮಿಸಿದ್ದಾರೆ.
ಇಂದು ವಿಧಾನಸಭಾ ಕಲಾಪ ನಡೆಯುತ್ತಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಗೆ ಆಗಮಿಸುತ್ತಿದ್ದಾರೆ. ಇಂದು ಕಲಾಪದಲ್ಲಿ ಏನಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.
ಕಲಾಪದಲ್ಲಿ ಭಾಗಿಯಾಗಲು ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಬಂದಿದ್ದಾರೆ. ಆಗ ಮಾಧ್ಯಮದವರು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಡಿಕೆಶಿ ಅವರು ಏನೂ ಮಾತನಾಡದೇ ಮೌನಕ್ಕೆ ಶರಣಾಗಿ ಎರಡು ಕೈ ಮುಗಿದು ವಿಧಾನಸಭೆಯೊಳಗೆ ಹೋಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಮುಂಬೈಗೆ ಹೋದ ಬೆನ್ನಲ್ಲೇ ಅವರು ಮುಂಬೈಗೆ ಹೋಗಿದ್ದರು. ಆದರೆ ಅಲ್ಲಿ ಶಾಸಕರು ತಂಗಿದ್ದ ಹೋಟೆಲ್‍ಗೆ ಹೋಗಲು ಅವಕಾಶ ಮಾಡಿಕೊಡದೆ ವಾಪಸ್ ಕಳುಹಿಸಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಎಂಟಿಬಿ ನಾಗರಾಜ್ ಕೂಡ ಮನವೊಲಿಕೆಗೆ ಬಗ್ಗದೆ ಯೂಟರ್ನ್ ಹೊಡೆದು ಮುಂಬೈಗೆ ತೆರಳಿದ್ದಾರೆ. ಹೀಗಾಗಿ ಸರ್ಕಾರವನ್ನು ಉಳಿಸಿಕೊಳ್ಳಲು ಸತತವಾಗಿ ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಹತಾಶೆಯಿಂದ ಸಾಕಾಪ್ಪ ಸಾಕು ಈ ಸರ್ಕಾರ, ಮಾಧ್ಯಮ ಎಂಬಂತೆ ಮಾಧ್ಯಮಗಳಿಗೆ ಕೈ ಮುಗಿದರಾ ಎಂಬ ಪ್ರಶ್ನೆ ಎದ್ದಿದೆ.
ಇಂದಿನ ಕಲಾಪದಲ್ಲಿ ಮೈತ್ರಿ ಸರ್ಕಾರ ಇಂದು ಕೊನೆಯಾಗುತ್ತಾ ಅಥವಾ ಉಳಿದುಕೊಳ್ಳುತ್ತಾ ಗೊತ್ತಿಲ್ಲ. ಆದರೆ ಇಂದಿನ ವಿಧಾನಸಭೆ ಕಲಾಪ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆ ಮಾಡುತ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಈ ನಡುವೆ ಸಿಎಂ ವಿಶ್ವಾಸ ಮತಯಾಚನೆ ಮಾಡಿದರು, ಮಾಡದಿದ್ದರೂ ಬಿಜೆಪಿ ಮಹಾ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.