ಮಂಡ್ಯ: ಕೆಆರ್ ಪೇಟೆ ಉಪಚುನಾವಣೆಯನ್ನು ಬಿಜೆಪಿ ಸ್ವಾಭಿಮಾನ ಮತ್ತು ಅಭಿವೃದ್ಧಿಯ ಹೆಸರು ಹೇಳಿಕೊಂಡು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಬ್ಬರದಿಂದ ಪ್ರಚಾರ ಮಾಡುತ್ತಿದೆ. ಈ ಪ್ರಚಾರದಿಂದ ಆಗುತ್ತಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಇಬ್ಬರೂ ಒಕ್ಕಲಿಗ ಸಮುದಾಯ ಐಕಾನ್ ನನ್ನು ತಮ್ಮ ತಮ್ಮ ಪಕ್ಷಗಳ ಪರವಾಗಿ ಕೆಆರ್ ಪೇಟೆ ಅಖಾಡಕ್ಕೆ ಧುಮುಕುತ್ತಿದ್ದಾರೆ.
ಕೆಆರ್ ಪೇಟೆಯ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಲು ಸ್ವಾಭಿಮಾನ ಮತ್ತು ಅಭಿವೃದ್ಧಿಯ ಎರಡು ಮಂತ್ರಗಳನ್ನು ಜಪ ಮಾಡುತ್ತಾ ಮತದಾರರನ್ನು ಒಲಿಸಿಕೊಳ್ಳಲು ಅಬ್ಬರದ ಪ್ರಚಾರ ಮಾಡುತ್ತಿವೆ. ಈಗಾಗಲೇ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಲವು ಘಟಾನುಘಟಿಗಳು ಕೆಆರ್ ಪೇಟೆ ಅಖಾಡಕ್ಕೆ ಇಳಿದು ಅಬ್ಬರ ಪ್ರಚಾರವನ್ನು ನಡೆಸುತ್ತಿವೆ.
Advertisement
Advertisement
ಈ ಮಧ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಮುಖ ನಾಯಕರು ಕೆಆರ್ ಪೇಟೆ ಅಖಾಡಕ್ಕೆ ಧುಮುಕದೇ ಇರುವುದು ಸದ್ಯ ಎರಡು ಪಕ್ಷಗಳಿಗೂ ಪ್ರಚಾರದಲ್ಲಿ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಡ್ಯಾಮೆಜ್ ಕಂಟ್ರೋಲ್ ಮಾಡಲು ಇಂದು ಜೆಡಿಎಸ್‍ನ ಒಕ್ಕಲಿಗ ಐಕಾನ್ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಇಂದು ಕೆಆರ್ ಪೇಟೆ ಅಖಾಡಕ್ಕೆ ಧುಮುಕಲಿದ್ದಾರೆ. ಈ ಹಿಂದೆ ಜೋಡೆತ್ತುಗಳು ಎಂದು ಕೈ ಎತ್ತಿದ್ದ ಹೆಚ್‍ಡಿಕೆ ಹಾಗೂ ಡಿಕೆಶಿ ಈಗ ಒಂಟೆತ್ತುಗಳಾಗಿ ತಮ್ಮ ಅಭ್ಯರ್ಥಿಗಳ ಪರ ಒಂದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
Advertisement
Advertisement
ಸದ್ಯ ಬಿಜೆಪಿ ಅಬ್ಬರ ಪ್ರಚಾರದ ನಡುವೆ ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಂಚ ಮಟ್ಟಿಗೆ ಸೊರಗಿರುವುದಂತೂ ಸುಳ್ಳಲ್ಲ. ಜೆಡಿಎಸ್ ಪಕ್ಷದಿಂದ ಇಲ್ಲಿಯವರೆಗೆ ಮಾಜಿ ಸಚಿವ ರೇವಣ್ಣ, ಮಂಡ್ಯ ಸ್ಥಳೀಯ ನಾಯಕರು ಹಾಗೂ ನಿಖಿಲ್ ಪ್ರಚಾರ ಮಾಡಿದ್ದು ಬಿಟ್ಟರೆ ಪ್ರಮುಖ ಐಕಾನ್‍ಗಳು ಎಂಟ್ರಿ ಕೊಟ್ಟಿರಲಿಲ್ಲ. ಇದರಿಂದ ಚುನಾವಣಾ ಪ್ರಚಾರದಲ್ಲಿ ಹಿನ್ನಡೆಯಾಗುತ್ತಿರುವುದನ್ನು ಎಚ್ಚೆತ್ತ ನಾಯಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೆಆರ್ ಪೇಟೆ ಅಖಾಡಕ್ಕೆ ಇಂದು ಇಳಿಸಲಿದ್ದಾರೆ. ಇಂದು ಕೆಆರ್ ಪೇಟೆಯ ಕಿಕ್ಕೇರಿ ಹೋಬಳಿ ಸೇರಿದಂತೆ ಹಲವು ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನ ಪ್ರಚಾರ ಮಾಡಿದ್ದು ಬಿಟ್ಟರೆ ಬೇರೆ ಯಾರು ಕೂಡ ಅಷ್ಟರ ಮಟ್ಟಿಗೆ ಪ್ರಚಾರ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಲೀಡರ್ ಡಿ.ಕೆ ಶಿವಕುಮಾರ್ ಅವರನ್ನು ಇಂದು ಅಖಾಡಕ್ಕೆ ಧುಮುಕಿಸಿ ಮತಬೇಟೆ ಆಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇಂದು ಡಿಕೆ ಕಾಂಗ್ರೆಸ್ ಅಭ್ಯರ್ಥಿ ಪರ ಶಿಳನೆರೆ ಹೋಬಳಿ ಸೇರಿದಂತೆ ಇತರೆ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.