ಮಂಡ್ಯ: ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಅವರನ್ನು ನೋಡಲು ಅಪಾರ ಅಭಿಮಾನಿಗಳು ಮಳವಳ್ಳಿ ನಗರದಲ್ಲಿ ಮುಗಿಬಿದ್ದಿದ್ದಾರೆ.
ನಟ ದರ್ಶನ್ ಮಳವಳ್ಳಿಗೆ ಬರುತ್ತಿದ್ದಂತೆ ಅವರಿಗೆ ಸಿದ್ಧಪಡಿಸಿದ್ದ ಬೃಹತ್ ಸೇಬಿನ ಹಾರ ತುಂಡಾಗಿ ಬಿದ್ದಿತ್ತು. ನಂತರ ಮತ್ತೆ ಮುರಿದ ಸೇಬಿನ ಹಾರವನ್ನು ಅಭಿಮಾನಿಗಳು ಜೋಡಿಸಿದ್ದು, ಸೇಬಿನ ಹಾರ ಮತ್ತು ಬೃಹತ್ ಹೂವಿನ ಹಾರ ಹಾಕಿ ಜನರು ಸ್ವಾಗತಿಸಿದ್ದಾರೆ.
ಮಕ್ಕಳು, ಯುವಕರು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೂಡ ದರ್ಶನ್ ನೋಡಲು ಬಂದಿದ್ದು, ಸಿಕ್ಕ ಸಿಕ್ಕ ಅಂಗಡಿ ಮತ್ತು ಮನೆಯ ಮೇಲೆ ನಿಂತು ದರ್ಶನ್ ಪ್ರಚಾರವನ್ನು ವೀಕ್ಷಿಸಿದ್ದಾರೆ. ರಸ್ತೆಯಲ್ಲಿ ಕ್ಕಿಕ್ಕಿರಿದಷ್ಟು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು, ದರ್ಶನ್ ವಾಹನದ ಹಿಂದೆ-ಮುಂದೆ ನಿಂತುಕೊಂಡು ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗುತ್ತಿದ್ದರು.
ಈ ವೇಳೆ ದರ್ಶನ್, ಏನಜಾ..ಚೆನಾಗಿದೀರ ಜಾ..ಎಂದು ಮಳವಳ್ಳಿ ಭಾಷೆಯಲ್ಲಿ ಭಾಷಣ ಆರಂಭಿಸಿದ್ದಾರೆ. ಸ್ವಾಭಿಮಾನವನ್ನು ಹಣದಿಂದ ಕೊಳ್ಳಲು ಆಗಲ್ಲ. ಸ್ವಾಭಿಮಾನದ ಮತಗಳನ್ನು ಸುಮಲತಾರಿಗೆ ಹಾಕಿ. ನೂರು ಜನ ಸುಮಲತಾ ಬಂದರೂ ಒಬ್ಬರೇ ಸುಮಲತಾ ಅಂಬರೀಶ್ ಇರೋದು. ಹೀಗಾಗಿ ಸುಮಲತಾ ಅಮ್ಮವರಿಗೆ ವೋಟ್ ಹಾಕಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಮಳವಳ್ಳಿಯ ಮಾರ್ಕಲ್ ಗೇಟ್ ಬಳಿ ಅಭಿಮಾನಿಯೊಬ್ಬರು ಬಿಜಲಿ ಹೆಸರಿನ ಕುದುರೆ ತಂದು ಅಭಿಮಾನ ಮೆರೆದಿದ್ದಾರೆ. ಕುದುರೆ ಮೇಲೆ ಬಂದು ಕೂರುವಂತೆ ಅಭಿಮಾನಿ ದರ್ಶನ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆಗ ಬೇಡ ಅದು ಗಾಬರಿಯಾಗುತ್ತೆ ಎಂದು ಹೇಳಿ ಕುದುರೆ ಏರಲು ದರ್ಶನ್ ನಿರಾಕರಿಸಿದ್ದಾರೆ.