ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಗ್ಯಾಸ್ ಕಟ್ಟರ್ ಮೂಲಕ ಬೋಟ್‍ನ ಕಂಪ್ರೇಸರ್ ಕಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.
ಮಲ್ಲಾರು ಗ್ರಾಮದ ಗುಡ್ಡೆಗೇರಿ ಎಂಬ ಜನವಸತಿ ಪ್ರದೇಶದಲ್ಲಿರುವ ಗುಜರಿ ಅಂಗಡಿಯ ಸುತ್ತಮುತ್ತ ಮನೆಗಳಿದ್ದು, ಅಂಗಡಿಗೆ ತಾಗಿಯೇ ಮಸೀದಿ ಇದೆ. ಬೆಳಗ್ಗೆ 10:30ರ ಸಂದರ್ಭದಲ್ಲಿ ಗುಜರಿ ಅಂಗಡಿಯ ಒಳಗೆ ಸ್ಫೋಟ ಆಗಿತ್ತು. ವಿಷಯ ತಿಳಿದಾಕ್ಷಣ ಪಾದೂರಿನ ಐಎಸ್ ಪಿಆರ್‍ಎಲ್ ಘಟಕದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗುಜರಿ ಅಂಗಡಿಗೆ ಸುತ್ತ ತಗಡುಗಳ ಶೀಟ್‍ಗಳನ್ನು ಅಳವಡಿಸಲಾಗಿದ್ದು, ಮೊದಲು ಅದನ್ನು ತೆಗೆದು ಅಗ್ನಿಶಾಮಕ ವಾಹನವನ್ನು ಒಳಗೆ ತೆಗೆದುಕೊಂಡು ಹೋಗಬೇಕಾಯಿತು.
ಅಗ್ನಿಶಾಮಕದಳದ ನಾಲ್ಕು ವಾಹನಗಳಿಂದ ಕಾರ್ಯಾಚರಣೆ ಮಾಡಲಾಯಿತು. ಬೆಂಕಿ ಉರಿಯುತ್ತಿದ್ದಂತೆ ಸಣ್ಣ ಸಣ್ಣ ಸಿಲಿಂಡರ್‍ಗಳು ಗುಜರಿ ಅಂಗಡಿ ಒಳಗೆ ಬ್ಲಾಸ್ಟ್ ಆಗಿವೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬರು ಸಾಗರ ಮೂಲದ ನಿಯಾಜ್ (40) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂಳಿದಂತೆ ಮೂವರು ಗಾಯಾಳುಗಳನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಅಧಿಕಾರಿಗಳು ರಕ್ಷಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರು ಸಜೀವ ದಹನ ಓರ್ವ ಗಂಭೀರ
ದಟ್ಟವಾದ ಹೊಗೆ ಮತ್ತು ಬೆಂಕಿ ಸಂಪೂರ್ಣವಾಗಿ ಗುಜರಿ ಅಂಗಡಿಯ ಸುತ್ತ ಆವರಿಸಿದ ಕಾರಣ ಅಗ್ನಿಶಾಮಕ ದಳದವರಿಗೆ ಮತ್ತು ಸ್ಥಳೀಯರಿಗೆ ಅಂಗಡಿಯ ಒಳಗೆ ಹೋಗಿ ಗಾಯಾಳುಗಳನ್ನು ಹೊರತರಲು ಸಾಧ್ಯವಾಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಥಳೀಯ ಸಮಾಜಸೇವಕ ಸೂರಿ ಶೆಟ್ಟಿ ಹೇಳಿದರು.
ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಅದೃಷ್ಟವಶಾತ್ ಪಕ್ಕದಲ್ಲಿದ್ದ ಮಸೀದಿ, ಮನೆಗಳಿಗೆ ಬೆಂಕಿ ಆವರಿಸಿಲ್ಲ. ಅಂಗಡಿ ಸುತ್ತಮುತ್ತ ಇದ್ದ ತೆಂಗಿನ ತೋಟ ಬೆಂಕಿಗಾಹುತಿಯಾಗಿದೆ. ನಾನು ಕಂಪನಿಯಿಂದ ಮೂರು ಬಾರಿ ನೀರು ತುಂಬಿಸಿಕೊಂಡು ಬಂದಿದ್ದೇನೆ. ಇನ್ನು ವಿಳಂಬವಾಗಿದ್ದರೆ, ಸುತ್ತಮುತ್ತಲಿನ ಮನೆ ಮತ್ತು ಮಸೀದಿಗೆ ಬೆಂಕಿ ಆವರಿಸಿಕೊಳ್ಳುತ್ತಿತ್ತು ಎಂದು ಐಎಸ್ ಪಿಆರ್‍ಎಲ್ ಫೈರ್ ತಂಡದ ಸಮಾದ್ ಮಜೂರು ಮಾಹಿತಿ ನೀಡಿದರು.
ಅಗ್ನಿಶಾಮಕ ಅಧಿಕಾರಿ ವಸಂತಕುಮಾರ್ ಮಾತನಾಡಿ, ಜನವಸತಿ ಪ್ರದೇಶದಲ್ಲಿ ಇಷ್ಟು ದೊಡ್ಡ ಗುಜರಿ ಅಂಗಡಿ ಬಹಳ ಡೇಂಜರ್. ಹೈಡ್ರಾಲಿಕ್ ಕಂಪ್ರೇಸರ್ ಬ್ಲ್ಯಾಸ್ಟ್ ಆಗಿರಬಹುದು. ಗ್ಯಾಸ್ ಮತ್ತು ಕೆಮಿಕಲ್ ಒಟ್ಟಾದ್ದರಿಂದ ದುರ್ಘಟನೆ ಸಂಭವಿಸಿರಬಹುದು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಕೂಡ ಜನರಲ್ಲಿ ಒಡಕು ಮೂಡಿಸುತ್ತಿದೆ: ಗುಲಾಂ ನಬಿ ಅಜಾದ್ ಆರೋಪ ತಳ್ಳಿ ಹಾಕಿದ ಖರ್ಗೆ
ಬೆಂಕಿ ಬಿದ್ದ ಕಾರಣ ಸುತ್ತಮುತ್ತ ಸ್ವಲ್ಪ ಹಾನಿಯಾಗಿದೆ. ಅಂಗಡಿ ಪಕ್ಕದಲ್ಲಿದ್ದ ಮಸೀದಿಗೆ ಹಾನಿಯಾಗಿದೆ. ಗುಜರಿ ಅಂಗಡಿಗೆ ಸುತ್ತಲೂ ತಗಡು ಶೀಟ್‍ಗಳನ್ನು ಹಾಕಿದ್ದಾರೆ. ಒಳಗೆ ಏನಾಗುತ್ತದೆ ಎಂಬ ಬಗ್ಗೆ ಆರಂಭದಲ್ಲಿ ಗೊತ್ತಾಗಲೇ ಇಲ್ಲ. ಬ್ಯಾರಿಕೇಡ್‍ಗಳನ್ನು ತೆರವು ಮಾಡಿ ಬೆಂಕಿ ನಂದಿಸಬೇಕಾಯ್ತು. ಏಕಕಾಲದಲ್ಲಿ 4 ಅಗ್ನಿಶಾಮಕ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್