ನವದೆಹಲಿ: ಇಂಡೋನೇಷ್ಯಾದಲ್ಲಿ (Indonesia) ವಾಯುಭಾರ ಕುಸಿತ ಉಂಟಾಗಿದ್ದು, `ಸೆನ್ಯಾರ್’ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆ ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ನೆಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇಂಡೋನೇಷ್ಯಾದಲ್ಲಿರುವ ಕುಟಾ ಮಕ್ಮೂರ್‌ದಲ್ಲಿ ವಾಯುಭಾರ ಕುಸಿತವು ಉಂಟಾದ ಪರಿಣಾಮ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆ ನ.27ರಿಂದ ಚಂಡಮಾರುತ ತೀವ್ರಗೊಳ್ಳಲಿರುವ ಪರಿಣಾಮ ಅಂಡಮಾನ್ ನಿಕೋಬಾರ್, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಡಿಕೆಶಿ ಭೇಟಿ ಬಳಿಕ ಆಪ್ತರ ಜೊತೆ ಜಾರಕಿಹೊಳಿ ಡಿನ್ನರ್ ಮೀಟಿಂಗ್
ನ.27ರವರೆಗೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ತಮಿಳುನಾಡಿನಾದ್ಯಂತ ಅತ್ಯಂತ ತಂಪು ವಾತಾವರಣವಿರಲಿದೆ. ಇನ್ನೂ ರಾಮೇಶ್ವರಂನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸದ್ಯ ತಮಿಳುನಾಡಿನ ತಿರುವರೂರಿನಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕೇರಳ ಮತ್ತು ಮಾಹೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನ.29ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಮುಂದಿನ ಆರು ದಿನಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮೂಲಕ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯಲ್ಲಿ ನ.29ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು. ಮಿಂಚು, ಗುಡುಗು ಸಹಿತ ಮಳೆಯಾಗಲಿದೆ.
ಇನ್ನೂ ಚಂಡಮಾರುತಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ ಭೂಕುಸಿತ ಉಂಟಾಗಿದ್ದು, 8 ಜನರು ಪ್ರಾಣಕಳೆದುಕೊಂಡಿದ್ದಾರೆ. 58 ಜನರು ಗಾಯಗೊಂಡಿದ್ದು, 2851 ಜನರು ಸ್ಥಳಾಂತರಗೊಂಡಿದ್ದಾರೆ. ಸೆನ್ಯಾರ್ ಎಂದರೆ ಸಿಂಹ ಎಂದರ್ಥ. ಈ ಚಂಡಮಾರುತಕ್ಕೆ ಯುಎಇ ಹೆಸರು ನೀಡಿದೆ.ಇದನ್ನೂ ಓದಿ: ಪಾನ್ ಮಸಾಲಾ ಉದ್ಯಮಿಯ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ

