– 2015 ರಲ್ಲಿ ಏನಾಗಿತ್ತು?
– ‘ಮಿಚಾಂಗ್’ ಮಿಂಚಿಗೆ ಚೆನ್ನೈ ತತ್ತರ
ಅದು ಡಿಸೆಂಬರ್ ತಿಂಗಳ ಆರಂಭ. ವರ್ಷದಲ್ಲಿ ಅದೆಷ್ಟು ಏಳು-ಬೀಳುಗಳು? ನೋವುಂಡ ದಿನಗಳೇ ಹೆಚ್ಚು. ಹೊಸ ವರ್ಷಕ್ಕೆ ಇನ್ನೊಂದೇ ಹೆಜ್ಜೆ. ಹೊಸ ವರ್ಷವಾದರೂ ನಮ್ಮ ಬಾಳಲ್ಲಿ ಹರುಷ ತರಲಿ ಎಂದು ಒಳಗೊಳಗೆ ಅಂದುಕೊಂಡವರೆಷ್ಟೋ. ಹೊಸ ಕನಸು ಹೊತ್ತು ಹುರುಪಿನಿಂದ ಹೊಸವರುಷದ ಆಗಮನದ ನಿರೀಕ್ಷೆಯಲ್ಲಿದ್ದವರೆಷ್ಟೋ. ಇಂಥ ಹೊತ್ತಿನಲ್ಲಿ ಧುತ್ತೆಂದು ಎದುರಾದ ಪ್ರವಾಹ, ಸಾವಿರಾರು ಕನಸುಗಳು ಕಮರುವಂತೆ ಮಾಡಿದ್ದಂತೂ ಅಕ್ಷರಶಃ ಸತ್ಯ. ಚೆನ್ನೈ (Chennai) ಭಾಗದ ಜನರ ಕನಸು ನೀರಲ್ಲಿ ಹೋಮ ಮಾಡಿದಂತಾಗಿದೆ.
Advertisement
ತಮಿಳುನಾಡಿನ (Tamil Nadu) ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತದ (Michaung Cyclone) ಅಬ್ಬರ ಜೋರಾಗಿದೆ. ಚಂಡಮಾರುತದಿಂದ ಪ್ರವಾಹ ಉಂಟಾಗಿ ಇಲ್ಲಿವರೆಗೆ 16 ಮಂದಿ ಬಲಿಯಾಗಿದ್ದಾರೆ. 18,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಬಂಧು-ಬಾಂಧವರನ್ನು ಕಳೆದುಕೊಂಡ ಜನ ಶೋಕದಲ್ಲಿ ಮುಳುಗಿದ್ದಾರೆ. ಸಾವಿರಾರು ಮಂದಿ ಮನೆ, ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ರಸ್ತೆಯಲ್ಲೇ ಎದೆ ಮಟ್ಟಕ್ಕೆ ನಿಂತ ನೀರಿನಲ್ಲೇ ಚಾಪೆ, ಬಟ್ಟೆ ಬ್ಯಾಗ್‌ಗಳನ್ನ ಹಿಡಿದು ಜನ ಮನೆ ತೊರೆಯುತ್ತಿರುವ ದೃಶ್ಯ ಮನಕಲಕುವಂತಿದೆ. ಇದನ್ನೂ ಓದಿ: ಮಿಚಾಂಗ್ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ
Advertisement
Advertisement
ಪ್ರಬಲ ಚಂಡಮಾರುತದ ರುದ್ರನರ್ತನದಿಂದಾಗಿ ಚೆನ್ನೈನ ವೇಲಾಚೇರಿ ಮತ್ತು ತಾಂಬರಂ ಪ್ರದೇಶಗಳು ನೀರಿನಲ್ಲಿ ಬಹುತೇಕ ಮುಳುಗಡೆಯಾಗಿವೆ. ಚಂಡಮಾರುತದ ಅಬ್ಬರ ಕೊಂಚ ತಗ್ಗಿದರೂ, ಮಳೆ ನೀರು ಮಾತ್ರ ಕಡಿಮೆಯಾಗಿಲ್ಲ. ನಾಗರಿಕರು ಮಕ್ಕಳೊಂದಿಗೆ ತೆರಳುವ, ಸಹಾಯಕ್ಕಾಗಿ ಅಧಿಕಾರಿಗಳನ್ನು ಅಂಗಲಾಚುವ, ದೋಣಿ ವ್ಯವಸ್ಥೆಗಾಗಿ ಬೇಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರವಾಹದ ಪರಿಣಾಮ ಜನಜೀವನಕ್ಕೆ ತೊಂದರೆಯಾಗಿದೆ. ವಿದ್ಯುತ್ ವ್ಯವಸ್ಥೆಯೂ ಹದಗೆಟ್ಟಿದೆ. ನಾಗರಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ವಿದ್ಯುತ್ ಕೇಬಲ್‌ಗಳು ನೀರಿನಲ್ಲಿ ಮುಳುಗಿ ಅಪಾಯ ತಂದೊಡ್ಡಿವೆ. ಈ ಎಲ್ಲಾ ದೃಶ್ಯಗಳು 2015 ರಲ್ಲಿ ಇದೇ ಚೆನ್ನೈನಲ್ಲಿ ಉಂಟಾದ ಪ್ರವಾಹದ ಭೀಕರ ದೃಶ್ಯಗಳನ್ನು ನೆನಪಿಸುತ್ತಿವೆ.
Advertisement
ಮಿಚಾಂಗ್ ಚಂಡಮಾರುತದ ಪ್ರವಾಹದಿಂದ ಉಂಟಾದ ವಿನಾಶವು ಚೆನ್ನೈನಲ್ಲಿ 2015 ರ ಪ್ರಳಯದ ಕರಾಳ ನೆನಪುಗಳನ್ನು ಮರಳಿ ತಂದಿದೆ. ಹಲವು ದಶಕಗಳಲ್ಲೇ ದಾಖಲೆಯ ಭಾರೀ ಮಳೆ ಮತ್ತು ಕಳಪೆ ಜಲಾಶಯದ ನಿರ್ವಹಣೆಯ ಪರಿಣಾಮದಿಂದ ಆ ದುರಂತ ಸಂಭವಿಸಿತ್ತು. ಹಾಗಾದರೆ 2015 ರಲ್ಲಿ ಏನಾಯಿತು? 8 ವರ್ಷಗಳ ಹಿಂದಿನ ಪ್ರವಾಹಕ್ಕೂ, ಈಗಿನ ಪ್ರವಾಹಕ್ಕೂ ಇರುವ ಹೋಲಿಕೆ ಏನು? ಭಿನ್ನತೆ ಏನು ಎಂಬುದನ್ನು ಇಲ್ಲಿ ನೋಡೋಣ.
2015 ರಲ್ಲಿ ಏನಾಗಿತ್ತು?
ಅದು ಕೂಡ ಡಿಸೆಂಬರ್ ತಿಂಗಳೇ. ಭೀಕರ ಪ್ರವಾಹಕ್ಕೆ ಇಡೀ ಚೆನ್ನೈ ತತ್ತರಿಸಿಹೋಗಿತ್ತು. 250 ಕ್ಕೂ ಹೆಚ್ಚು ಜನರ ಸಾವು. ಲಕ್ಷಾಂತರ ಮನೆ ಕಳೆದುಕೊಂಡವರ ಆರ್ತನಾದ ಈಗಲೂ ಕಣ್ಣಿಗೆ ಕಟ್ಟುವಂತಿದೆ. ತಮಿಳುನಾಡಿನ ಇತಿಹಾಸದಲ್ಲೇ ಅಂತಹ ಭೀಕರ ಪ್ರವಾಹ ಎದುರಾಗಿರಲಿಲ್ಲ. ಇದನ್ನೂ ಓದಿ: ‘ಮಿಚಾಂಗ್’ ಎಫೆಕ್ಟ್; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ
ನಿರಂತರ ಮಳೆಯಿಂದಾಗಿ ಚೆಂಬರಂಬಕ್ಕಂ ಜಲಾಶಯ ತುಂಬುವ ಹಂತಕ್ಕೆ ಬಂತು. ಈ ವೇಳೆ ಅಡ್ಯಾರ್ ನದಿಗೆ ಅಪಾಯಕಾರಿ ಪ್ರಮಾಣದಲ್ಲಿ ನೀರು ಹರಿಸಲಾಯಿತು. ಇಲ್ಲಿಂದ ಶುರುವಾಯಿತು ಭೀಕರ ಪ್ರವಾಹದ ಬಿಕ್ಕಟ್ಟು. 2015ರ ಡಿಸೆಂಬರ್ 1 ರಂದು ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಜಲಾಶಯ 3,396 ಮಿಲಿಯನ್ ಘನ ಅಡಿಗಳಷ್ಟು (ಕ್ಯೂಬಿಕ್ ಫೀಟ್) ತುಂಬಿತ್ತು. ಸಂಜೆಯ ಹೊತ್ತಿಗೆ ಇಂಜಿನಿಯರ್‌ಗಳು ಭೀತಿಯಿಂದ 29,400 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದರು. ನದಿಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡದೇ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದು ವ್ಯಾಪಕ ಅವ್ಯವಸ್ಥೆಗೆ ಕಾರಣವಾಯಿತು. ಡಿಸೆಂಬರ್ 2 ರ ಮಧ್ಯರಾತ್ರಿಯ ಹೊತ್ತಿಗೆ ಅಡ್ಯಾರ್ ನದಿಯ 4 ಕಿಮೀ ವ್ಯಾಪ್ತಿಯ ಪ್ರದೇಶಗಳು ಮುಳುಗಿಹೋದವು.
ಇದಕ್ಕೂ ಮೊದಲು, ನವೆಂಬರ್ 28 ರಂದು ಮಳೆಯ ಎಚ್ಚರಿಕೆ ನೀಡಲಾಗಿತ್ತು. 50 ಮಿಮೀ ಮಳೆಯ ಮುನ್ಸೂಚನೆ ಬಂದಿತ್ತು. ಆದರೂ ಚೆಂಬರಂಬಾಕ್ಕಂನಿಂದ ಹೊರಹರಿವು ಹೆಚ್ಚಾಗಿ ಮಾಡಲಿಲ್ಲ. ಎರಡು ದಿನಗಳ ನಂತರ ಚೆನ್ನೈನಲ್ಲಿ 14 ಗಂಟೆಗಳಲ್ಲಿ 200 ಮಿಮೀ ಮಳೆ ಸುರಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಜಲಾಶಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಜನರಿಗೆ ಎಚ್ಚರಿಕೆ ನೀಡದೇ ಬೃಹತ್ ಪ್ರಮಾಣದ ನೀರನ್ನು ಹಠಾತ್ ಬಿಡುಗಡೆ ಮಾಡಿದ್ದು ಹಲವು ಪ್ರಶ್ನೆ ಹುಟ್ಟುಹಾಕಿತು. ನಿಜಕ್ಕೂ ಆ ಸಂದರ್ಭದಲ್ಲಿ ನೈಸರ್ಗಿಕ ವಿಕೋಪಕ್ಕಿಂತ ಜಲಾಶಯದ ತಪ್ಪು ನಿರ್ವಹಣೆಯೇ ಪ್ರವಾಹದ ಭೀಕರತೆಗೆ ಪ್ರಮುಖ ಕಾರಣವಾಯಿತು.
ಈ ಪ್ರವಾಹಕ್ಕೆ ಅದು ಹೇಗೆ ಭಿನ್ನ?
2015 ರ ಪ್ರವಾಹಕ್ಕಿಂತ ಭಿನ್ನವಾಗಿ ಪ್ರಸ್ತುತ ಪ್ರವಾಹವು ಸೈಕ್ಲೋನಿಕ್ ಚಂಡಮಾರುತದ ನೇರ ಪರಿಣಾಮವಾಗಿದೆ. ಚೆನ್ನೈನಲ್ಲಿ ಡಿ.4 ರಂದು 24 ಸೆಂ.ಮೀ.ನಷ್ಟು (ಒಂದೇ ದಿನ) ಮಳೆಯಾಗಿದೆ. ಆದರೆ 2015 ರಲ್ಲಿ 29 ಸೆಂ.ಮೀ ನಷ್ಟು ಮಳೆ ಸುರಿದಿತ್ತು. ಈಗಿನದಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯೇ. ಆದರೂ, 21 ಸೆಂಮೀ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮಳೆಯನ್ನು ‘ಭಾರೀ ಪ್ರಮಾಣ’ದ್ದು ಎಂದು ಹೇಳಲಾಗುತ್ತದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ
ಚೆನ್ನೈ ಮೇಲೆ ಮಿಚಾಂಗ್ ಚಂಡಮಾರುತದ ಪರಿಣಾಮವೇನು?
ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳ ಮೇಲೆ ಮಿಚಾಂಗ್ ಚಂಡಮಾರುತ ಗಮನಾರ್ಹ ಪರಿಣಾಮ ಬೀರಿದೆ. ಚಂಡಮಾರುತವು 16 ಸಾವುಗಳಿಗೆ ಕಾರಣವಾಯಿತು. ಚೆನ್ನೈ ನಗರ ವ್ಯಾಪ್ತಿಯಲ್ಲಿ 6,000 ಸೇರಿದಂತೆ ಸರಿಸುಮಾರು 18,729 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದಿಂದ ಎಡಬಿಡದೇ ಸುರಿದ ಮಳೆಯು ತೀವ್ರ ಪ್ರವಾಹಕ್ಕೆ ಕಾರಣವಾಯಿತು. ಚಂಡಮಾರುತದಿಂದ ಎಡೆಬಿಡದೆ ಸುರಿದ ಮಳೆಯು ತೀವ್ರ ಪ್ರವಾಹಕ್ಕೆ ಕಾರಣವಾಯಿತು. ಅಡ್ಯಾರ್ ನದಿಯ ಪ್ರವಾಹದ ಹಾದಿಯಲ್ಲಿ ನಿರ್ಮಿಸಲಾದ ಚೆನ್ನೈ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. ಸುಮಾರು 300 ವಿಮಾನಗಳ ಮೇಲೆ ಪರಿಣಾಮ ಬೀರಿತು. 1,500 ಕ್ಕೂ ಹೆಚ್ಚು ಪ್ರಯಾಣಿಕರು ಸಮಸ್ಯೆಗೆ ಸಿಲುಕುವಂತಾಯಿತು. ದಕ್ಷಿಣ ರೈಲ್ವೆಯು ಹಲವಾರು ದೀರ್ಘ ಪ್ರಯಾಣದ ರೈಲುಗಳನ್ನು ರದ್ದುಗೊಳಿಸಿತು. ತಗ್ಗು ಪ್ರದೇಶಗಳಾದ ಮೆಡವಕ್ಕಂ, ಕೀಲ್ಕತ್ತಲೈ ಮತ್ತು ಮುಡಿಚುರ್ 3ರಿಂದ 4 ಅಡಿಗಳಷ್ಟು ನೀರಿನಲ್ಲಿ ಮುಳುಗಿವೆ.
ಕತ್ತಲಲ್ಲಿ ಬದುಕು
ನಂದಿವರಂ-ಗುಡುವಂಚೇರಿ ಸರೋವರ ಕೂಡ ತುಂಬಿದ್ದು, ಸಮೀಪದ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಚೆನ್ನೈ-ತಿರುಚಿ ಹೆದ್ದಾರಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕ್ರೋಮ್‌ಪೇಟೆ ಸರ್ಕಾರಿ ಆಸ್ಪತ್ರೆಯ ನೆಲ ಮಹಡಿ ಜಲಾವೃತಗೊಂಡಿದೆ. ಇದರಿಂದ ಜನರಿಗೆ ಆರೋಗ್ಯ ಸೇವೆಯೂ ಅಸ್ತವ್ಯಸ್ತವಾಗಿದೆ. ಭಾನುವಾರ ರಾತ್ರಿಯಿಂದಲೇ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಚೆನ್ನೈ ಕಾರ್ಪೊರೇಷನ್ ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಪ್ರಯತ್ನಗಳ ಹೊರತಾಗಿಯೂ ಸೋಮವಾರ ಅನೇಕ ರಸ್ತೆಗಳು ಸಂಚಾರಕ್ಕೆ ದುರ್ಗಮವಾಗಿದ್ದವು.
ಮಿಚಾಂಗ್ ಚಂಡಮಾರುತದ ಪ್ರಭಾವವು ಚೆನ್ನೈನಲ್ಲಿ ದೂರಸಂಪರ್ಕವನ್ನು ತೀವ್ರವಾಗಿ ಅಡ್ಡಿಪಡಿಸಿತು. ಫೋನ್ ಸೇವೆಗಳು, ಸೆಲ್ಫೋನ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇರಿದಂತೆ ಅಗತ್ಯ ಸಂವಹನ ಜಾಲಗಳನ್ನು ಸ್ಥಗಿತಗೊಳಿಸಿತು. ಚೆನ್ನೈನಾದ್ಯಂತ ಅನೇಕ ದೂರವಾಣಿ ವಿನಿಮಯ ಕೇಂದ್ರಗಳು ಸ್ಥಗಿತಗೊಂಡವು. ಇಂಟರ್ನೆಟ್ ಸೇವೆಗಳು ಮತ್ತು ಮೊಬೈಲ್ ಸಂಪರ್ಕದ ಮೇಲೆ ಪರಿಣಾಮ ಬೀರಿತು. ನಿವಾಸಿಗಳು ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುತ್ತಿದ್ದಾರೆ. ಇದನ್ನೂ ಓದಿ: ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆ ಮುಂದೂಡಿಕೆ
‘ಮಿಚಾಂಗ್’ ಪ್ರಭಾವ ಏಕೆ ತೀವ್ರ?
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹವಾಮಾನಶಾಸ್ತ್ರದ ಉಪ ಮಹಾನಿರ್ದೇಶಕ ಎಸ್.ಬಾಲಚಂದ್ರನ್ ಅವರು ಚಂಡಮಾರುತದ ತೀವ್ರತೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಮಿಚಾಂಗ್’ ಚಂಡಮಾರುತ ಕರಾವಳಿಯ ಸಮೀಪ ತನ್ನ ಪ್ರಭಾವವನ್ನು ಗಮನಾರ್ಹವಾಗಿ ವರ್ಧಿಸಿತು. ಕರಾವಳಿ ಸಮೀಪದಲ್ಲಿ ಇದು ಕೇವಲ 90 ಕಿಲೋಮೀಟರ್ ದೂರದಲ್ಲಿದೆ. ಹಿಂದಿನ ಚಂಡಮಾರುತಗಳಿಗೆ ಹೋಲಿಸಿದರೆ ದೂರದ ವ್ಯಾಪ್ತಿ ಆತಂಕಕಾರಿಯಾಗಿದೆ. ಚಂಡಮಾರುತ ನಿಶ್ಚಲವಾಗಿರುವಾಗ ವ್ಯವಸ್ಥೆಯನ್ನು ತೀವ್ರಗೊಳಿಸಿತು. ಈ ತೀವ್ರತೆಯು ಕರಾವಳಿಯ ಸಮೀಪದಲ್ಲಿ ಸಂಭವಿಸಿ, ಭಾರೀ ಮತ್ತು ದೀರ್ಘಕಾಲದ ಮಳೆಗೆ ಕಾರಣವಾಯಿತು.