– ಶಾಲಾ, ಕಾಲೇಜುಗಳು ಬಂದ್
– 2,229 ಪರಿಹಾರ ಕೇಂದ್ರಗಳ ಸ್ಥಾಪನೆ
– ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ (Cyclone Fengal) ತೀವ್ರತೆ ಪಡೆದಿದ್ದು, ಶನಿವಾರ (ಇಂದು) ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು (Tamil Nadu) ಹಾಗೂ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಜೊತೆಗೆ ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಿಣಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ
ಅಲ್ಲದೇ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ತಮಿಳುನಾಡು, ಪುದುಚೇರಿಯ ಜೊತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುದಾನ ಕೋರಿದ ಡಿಕೆಶಿ: ಏನೇನು ಮನವಿ ಮಾಡಲಾಗಿದೆ?
ಈಗಾಗಲೇ ತಮಿಳುನಾಡಿನಲ್ಲಿ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಫೆಂಗಲ್ ಚಂಡಮಾರುತವು ಭಾರಿ ಮಳೆ ತರಲಿದ್ದು ಮತ್ತು ಗಂಟೆಗೆ 70 ರಿಂದ 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ರಾಜ್ಯ ಸರ್ಕಾರ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ನಿಯಮ ಜಾರಿಗೊಳಿಸುವಂತೆ ಸೂಚಿಸಿದೆ. ಮಳೆ ಮುನ್ಸೂಚನೆ ಹೊಂದಿರುವ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
2,229ರ ಪರಿಹಾರ ಶಿಬಿರ ಸ್ಥಾಪನೆ:
ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ರಾಜ್ಯಾದ್ಯಂತ 2,229 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಆಶ್ರಯ ಅಗತ್ಯವಿರುವವರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಲಾಗಿದೆ. ಈವರೆಗೆ ತಿರುವಳ್ಳೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ 164 ಕುಟುಂಬಗಳ 471 ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದೆ. ಸಂಭವನೀಯ ಪ್ರವಾಹದ ನಿರೀಕ್ಷೆಯಲ್ಲಿ ಸ್ಥಳೀಯ ಅಧಿಕಾರಿಗಳು ಮೋಟಾರ್ ಪಂಪ್‌ಗಳು, ಜನರೇಟರ್‌ಗಳು ಮತ್ತು ದೋಣಿಗಳು ಸೇರಿದಂತೆ ಅಗತ್ಯ ಸಾಧನಗಳನ್ನು ಚೆನ್ನೈ, ಕಡಲೂರು ಮತ್ತು ಮೈಲಾಡುತುರೈ ಮುಂತಾದ ಪೀಡಿತ ಪ್ರದೇಶಗಳಿಗೆ ನಿಯೋಜಿಸಿದ್ದಾರೆ.
ಶ್ರೀಲಂಕಾದಲ್ಲಿ 12 ಸಾವು:
ಶ್ರೀಲಂಕಾದಲ್ಲೂ ಫೆಂಗಲ್ ಹಾವಳಿಗೆ ಜನರು ತತ್ತರಿಸಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಮಳೆ ಸಂಬಂಧಿತ ದುರ್ಘಟನೆಗಳಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ಗೆ ತೆರಳುವಂತೆ ಶಾಹಿ ಈದ್ಗಾ ಸಮಿತಿಗೆ ಸೂಚನೆ; ʻಹೈʼಆದೇಶ ಬರೋವರೆಗೆ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ