– ಸಿಡಿಲು ಬಡಿದು ಮನೆಗೆ ಹಾನಿ
ಉಡುಪಿ: ಫೆಂಗಲ್ ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಕತ್ತಲು ಆವರಿಸಿದೆ. ಸೋಮವಾರ ಸಂಜೆಯಿಂದ ನಿರಂತರವಾಗಿ ಮಳೆ ಆಗುತ್ತಿದ್ದು, ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.
ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ವಿಸ್ತರಿಸಲಾಗಿದೆ. ಭಾರೀ ಮೋಡ ಮುಸುಕಿದ ವಾತಾವರಣ ಇರೋದರಿಂದ ಮಂಗಳವಾರವೂ ದಿನಪೂರ್ತಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.
ಉಡುಪಿಯಲ್ಲಿ ಕಳೆದ ರಾತ್ರಿಯ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಆಗಿದೆ. ಸುಮಾರು ಮೂರು ಗಂಟೆಗಳ ಕಾಲ ಸುರಿದಿದ್ದ ಧಾರಾಕಾರ ಮಳೆಗೆ ಇಂದು ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮೋಡ ಮುಸುಕಿದ ವಾತಾವರಣ, ಮಳೆ ಮುಂದುವರೆಯುವ ಸಾಧ್ಯತೆ ಇದೆ. ಕಡಲಿಗಿಳಿಯದಂತೆ ಮೀನುಗಾರರಿಗೆ ಕಟ್ಟೆಚ್ಚರ ರವಾನಿಸಲಾಗಿದೆ.
ಉಡುಪಿಯಲ್ಲಿ ಸೋಮವಾರ ರಾತ್ರಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಬ್ರಹ್ಮಾವರದಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ನೀಲಾವರದ ರಾಧಾ ಶೆಡ್ತಿಯವರ ಮನೆಗೆ ಸಿಡಿಲು ಬಡಿದಿದೆ. ವಿದ್ಯುತ್ ಉಪಕರಣ, ಪರಿಕರಗಳಿಗೆ ಹಾನಿಯಾಗಿದೆ.