ಭುವನೇಶ್ವರ್: ಒಡಿಶಾದಲ್ಲಿ ಅಟ್ಟಹಾಸಗೈದು 8 ಅಮಾಯಕ ಜೀವಗಳನ್ನು ಆಹುತಿ ಪಡೆದು ಘಟ ಸರ್ಪದಂತೆ ಬುಸುಗುಟ್ಟಿದ್ದ ಫೋನಿ ಚಂಡಮಾರುತ ಒಡಿಶಾದಿಂದ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದೆ.
175 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದ ಪ್ರಚಂಡ ಮಾರುತ, ಜಗ್ನನಾಥನ ಊರಲ್ಲಿ ಕಂಡುಕೇಳರಿಯದಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ರಾಜಭವನಕ್ಕೆ ಸಂಪರ್ಕವೆಲ್ಲ ಕಡಿತಗೊಂಡಿದ್ದು, ಪುರಿಯಲ್ಲಿ ಸರ್ಕಾರಿ ಕಚೇರಿ, ಭುವನೇಶ್ವರದಲ್ಲಿರುವ ಏಮ್ಸ್ ಆಸ್ಪತ್ರೆ ಕಟ್ಟಡಕ್ಕೆ ಹಾನಿಯಾಗಿದೆ.
Advertisement
Advertisement
ಭುವನೇಶ್ವರ್ ಏರ್‍ಪೋರ್ಟ್ ನ ಯಂತ್ರೋಪಕರಣಕ್ಕೆ ಧಕ್ಕೆ ಆಗಿದ್ದು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಪ್ಯಾರಾದೀಪ್ ಮತ್ತು ಗೋಪಾಲ್‍ಪುರ್ ಬಂದರುಗಳನ್ನು ಬಂದ್ ಮಾಡಲಾಗಿದೆ. ಹೌರಾ-ಚೆನ್ನೈ ನಡುವೆ ಸಂಚರಿಸೋ 220 ರೈಲುಗಳ ಓಡಾಟವನ್ನೂ ನಿಲ್ಲಿಸಲಾಗಿದೆ. 10 ಸಾವಿರ ಹಳ್ಳಿಗಳು ಮತ್ತು ಪಟ್ಟಣಗಳ 52 ಏರಿಯಾಗಳ 12 ಲಕ್ಷ ಮಂದಿಯನ್ನ ಸ್ಥಳಾಂತರ ಮಾಡಲಾಗಿದೆ. ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ಒಡಿಶಾದಲ್ಲಾಗಿರುವ ವ್ಯಾಪಕ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಇದನ್ನೂ ಓದಿ: ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?
Advertisement
Advertisement
ಪಶ್ಚಿಮ ಬಂಗಾಳದಲ್ಲೂ 100ರಿಂದ 110 ಕಿಲೋ ಮೀಟರ್ ವೇಗದಲ್ಲಿ ಫೋನಿ ಅಪ್ಪಳಿಸಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಜಾಗ್ರಾಂ, ಕೋಲ್ಕತ್ತಾದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತಾ ಏರ್‍ಪೋರ್ಟ್ ನಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೆಳಗ್ಗೆ 11.30ರವರೆಗೆ ಅತ್ಯಂತ ಭೀಕರ ಸ್ಥಿತಿಯಲ್ಲಿರುವ ಫೋನಿ ಚಂಡಮಾರುತ, ರಾತ್ರಿ 11.30ರ ವೇಳೆಗೆ ತೀವ್ರ ಸ್ಥಿತಿಗೆ ತನ್ನ ಅಬ್ಬರವನ್ನ ತಗ್ಗಿಸಲಿದೆ ಎಂಬುದಾಗಿ ತಿಳಿದುಬಂದಿದೆ.