– ಕೋಲ್ಕತ್ತಾ, ಭುವನೇಶ್ವರ್ ಏರ್ಪೋಟ್ 16 ಗಂಟೆ ಬಂದ್
– 13 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರ
ಭುವನೇಶ್ವರ: ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಾನಾ ಚಂಡಮಾರುತ (Cyclone Dana) ತೀವ್ರ ಸ್ವರೂಪ ಪಡೆದಿದೆ.
ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಜೋರು ಗಾಳಿ ಸಹಿತ ಮಳೆ ಆಗ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿದೆ. ಅತ್ಯಂತ ವೇಗದಲ್ಲಿ ಉತ್ತರ ವಾಯುವ್ಯ ದಿಕ್ಕಿನತ್ತ ತೂಫಾನ್ ಚಲಿಸ್ತಿದೆ. ಶುಕ್ರವಾರ ನಸುಕಿನ ಜಾವ ಬಿಟಾರ್ಕನಿಕಾ ನ್ಯಾಷನಲ್ ಪಾರ್ಕ್ ಮತ್ತು ಧಮ್ರಾ ಬಂದರು ನಡುವೆ ತೀರವನ್ನು ದಾನಾ ಚಂಡಮಾರುತ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ವೇಳೆ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಮುಂಜಾಗ್ರತಾ ಕ್ರಮವಾಗಿ ಕೊಲ್ಕೋತ್ತಾ ಮತ್ತು ಭುವನೇಶ್ವರ್ ಏರ್‌ಪೋರ್ಟ್‌ಗಳನ್ನು ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೂ ಬಂದ್ ಮಾಡಲಾಗಿದೆ. ಒಡಿಶಾ, ಬಂಗಾಳದಲ್ಲಿಯೂ ಹೈ ಅಲರ್ಟ್ ಪ್ರಕಟಿಸಲಾಗಿದೆ. 13 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸರ್ಕಾರ ಶಿಫ್ಟ್ ಮಾಡಿದೆ. 300ಕ್ಕೂ ಹೆಚ್ಚು ರೈಲುಗಳ ಸೇವೆಗಳಲ್ಲಿ ವ್ಯತ್ಯಯವಾಗ್ತಿದೆ.
ಪಶ್ಚಿಮ ಬಂಗಾಳ ಕಂಟ್ರೋಲ್ ರೂಮ್‌ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ನಿಗಾ ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.