– ಕಾರು ಚಾಲಕ ನೀಡಿದ ಹಣ ನಿರಾಕರಿಸಿದ ಸ್ನೇಹಿತರು
ಲಕ್ನೋ: ಕೊರೊನಾ ಲಾಕ್‍ಡೌನ್ ಪರಿಣಾಮ ಸಾವಿರಾರು ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದೇ ರೀತಿ ಕಾರ್ಮಿಕನೊಬ್ಬ ಸೈಕಲ್ ಮೂಲಕ ತನ್ನೂರಿಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಸಘೀರ್ ಅನ್ಸಾರಿ (26). ದೆಹಲಿಯಿಂದ ಬಿಹಾರದ ತನ್ನ ಚಂಪಾರನ್ ಗ್ರಾಮಕ್ಕೆ ಅನ್ಸಾರಿ ಹೋಗುತ್ತಿದ್ದರು. ಆದರೆ ಲಕ್ನೋದಲ್ಲಿ ತಿಂಡಿ ಮಾಡುತ್ತಿದ್ದಾಗ ಕಾರು ಬಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅನ್ಸಾರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ.
ಏನಿದು ಪ್ರಕರಣ?
ಕೊರೊನಾ ಲಾಕ್‍ಡೌನ್‍ನಿಂದ ಕೆಲಸ ಇಲ್ಲದೆ ತನ್ನ ಏಳು ಸ್ನೇಹಿತರೊಂದಿಗೆ ಸೈಕಲ್ ಮೂಲಕ ತನ್ನೂರಿಗೆ ಹೋಗಲು ಅನ್ಸಾರಿ ನಿರ್ಧರಿಸಿದ್ದರು. ಅದರಂತೆಯೇ ಎಲ್ಲರೂ ದೆಹಲಿಯಿಂದ ಮೇ 5 ರಂದು ತಮ್ಮ ಊರಿಗೆ ಸೈಕಲ್ ಮೂಲಕ ಹೊರಟಿದ್ದರು. ಐದು ದಿನಗಳ ನಂತರ ಕಾರ್ಮಿಕರು ಲಕ್ನೋ ತಲುಪಿದ್ದಾರೆ. ಐದು ದಿನಗಳಲ್ಲಿ 1,000 ಕಿಲೋ ಮೀಟರ್ ದೂರ ಸೈಕಲ್ ಮೂಲಕ ಬಂದಿದ್ದರು.
ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಬೆಳಗ್ಗಿನ ತಿಂಡಿ ತಿನ್ನಲು ಎಲ್ಲರೂ ಸೈಕಲ್ ನಿಲ್ಲಿಸಿ ರಸ್ತೆ ಬದಿಯ ಡಿವೈಡರ್ ಮೇಲೆ ಕುಳಿತಿದ್ದರು. ಈ ವೇಳೆ ಲಕ್ನೋ ಸಂಖ್ಯೆ ಹೊಂದಿರುವ ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದು ಮೊದಲಿಗೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಅನ್ಸಾರಿಗೆ ಡಿಕ್ಕಿ ಹೊಡೆದಿದೆ.
ತಕ್ಷಣ ಕಾರು ಚಾಲಕನು ಕಾರಿನಿಂದ ಇಳಿದು ಅವರಿಗೆ ಪರಿಹಾರವಾಗಿ ಹಣವನ್ನು ನೀಡಲು ಮುಂದಾಗಿದ್ದಾನೆ. ಆದರೆ ಅನ್ಸಾರಿ ಸ್ನೇಹಿತರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅನ್ಸಾರಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನ್ಸಾರಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ಪೊಲೀಸರು ಚಾಲಕನ ಅಜಾಗರುಕತೆಯಿಂದ ಅಪಘಾತ ಸಂಭವಿಸಿದೆ ಎಂದು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಮತ್ತು ಹಣವಿಲ್ಲದೆ ಪರದಾಡುತ್ತಿದ್ದರು. ಕೊನೆಗೆ ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಊರಿಗೆ ಹೋಗುತ್ತಿದ್ದಾರೆ. ಇತ್ತೀಚೆಗೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.