ಚಿಕ್ಕಬಳ್ಳಾಪುರ: ನಾಡಬಂದೂಕಿಗೆ ಸೈಕಲ್ ಚಕ್ರದ ಸಣ್ಣ ಗಾತ್ರದ ಸ್ಟೈನ್ ಲೆಸ್ ಸ್ಟೀಲ್ ಬಾಲ್ಸ್ ಬಳಸಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟದ ಮಾರುತಿ ನಗರದಲ್ಲಿ ನಡೆದಿದೆ.
ಅನೆಮಡುಗು ಗ್ರಾಮದ ಗಾರೆ ಕೆಲಸಗಾರ ಗೋವಿಂದಪ್ಪ ಗುಂಡಿನ ದಾಳಿಗೆ ಓಳಗಾದ ವ್ಯಕ್ತಿ. ಶಿಡ್ಲಘಟ್ಟ ನಗರದಲ್ಲೇ ವಾಸವಾಗಿದ್ದ ಗೋವಿಂದಪ್ಪ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತರು ನಾಡಬಂದೂಕು ಬಳಸಿ ಹಿಂಬದಿಯಿಂದ ಗುಂಡಿನ ದಾಳಿ ನಡೆಸಿದ್ದಾರೆ. ಸಣ್ಣ ಗಾತ್ರದ 6 ಬಾಲ್ಸ್ ಗೋವಿಂದಪ್ಪ ಬೆನ್ನಿನ ಭಾಗಕ್ಕೆ ಹೊಕ್ಕಿವೆ. ಶಿಡ್ಲಘಟ್ಟ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೃಷ್ಟವಶಾತ್ ಗೋವಿಂದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಗುಂಡಿನ ದಾಳಿ ನಡೆಸಿದವರು ಯಾರು ಎಂಬುದು ಸ್ವತಃ ದಾಳಿಗೆ ಓಳಗಾದ ಗೋವಿಂದಪ್ಪರಿಗೂ ಗೊತ್ತಾಗಿಲ್ಲ. ಯಾರ ಮೇಲೂ ಅನುಮಾನ ಸಹ ಇಲ್ಲ ಎಂದು ಪೊಲೀಸರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಪೊಲೀಸರು ಸುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿ, ಆ ಸಮಯದಲ್ಲಿ ಹಾದು ಹೋದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.