– 3 ಗಂಟೆ ಸರತಿ ಸಾಲಲ್ಲಿ ನಿಂತು ಸುಸ್ತಾದ ಪ್ರಯಾಣಿಕರು
ಲಂಡನ್: ಸೈಬರ್ ದಾಳಿಯಿಂದಾಗಿ ಲಂಡನ್‌ನ ಹೀಥ್ರೂ (London Heathrow Airport) ಸೇರಿದಂತೆ ಪ್ರಮುಖ ಯುರೂಪಿಯನ್ ವಿಮಾನ ನಿಲ್ದಾಣಗಳ ವಿಮಾನ ಯಾನದಲ್ಲಿ ವಿಳಂಬವಾಗಿದೆ. ಕೆಲ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ (Flight Cancellations) ಎಂದು ವರದಿಗಳಿಂದ ತಿಳಿದುಬಂದಿದೆ.
ಸೈಬರ್ ದಾಳಿಯ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ಯುರೋಪಿಯನ್ ವಿಮಾನ ನಿಲ್ದಾಣಗಳ (European Airports) ಚೆಕ್-ಇನ್ ಮತ್ತು ಬೋರ್ಡಿಂಗ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಯುರೂಪಿಯನ್‌ನ ಹಲವು ವಿಮಾನ ನಿಲ್ದಾಣಗಳಲ್ಲಿ ವಿಳಂಬ ಎಚ್ಚರಿಕೆ ನೀಡಲಾಗಿದೆ ಎಂದು ಬೆಲ್ಜಿಯಂನ ಬ್ರಸೆಲ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬರ್ ದಾಳಿಯ ನಂತರ ಸ್ವಯಂಚಾಲಿತ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಮ್ಯಾನ್ಯುವಲ್ (ಹಸ್ತಚಾಲಿತ) ಚೆಕ್-ಇನ್ ಮತ್ತು ಬೋರ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಬೆನ್ನಲ್ಲೇ ಬ್ರಸೆಲ್ಸ್ ವಿಮಾನ ನಿಲ್ದಾಣವು 10 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಜೊತೆಗೆ 17 ವಿಮಾನಗಳ ಹಾರಾಟದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಬರ್ಲಿನ್ ವಿಮಾನ ನಿಲ್ದಾಣದಲ್ಲೂ ಹಲವಾರು ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ.
ಈ ಸಮಸ್ಯೆ ಯಾವಾಗ ಪರಿಹರಿಸಲಾಗುತ್ತೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ತಾಂತ್ರಿಕ ತಂಡಗಳು ತ್ವರಿತ ಪರಿಹಾರಕ್ಕಾಗಿ ಕೆಲಸ ಮಾಡುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
3 ಗಂಟೆ ಸರತಿ ಸಾಲಲ್ಲಿ ನಿಂತು ಸುಸ್ತಾದ ಜನ 
ಸೈಬರ್ ದಾಳಿ ಎಫೆಕ್ಟ್‌ನಿಂದಾಗಿ ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನಲ್ಲಿ ಮ್ಯಾನ್ಯುವಲ್ ಮೂಲಕ ಚೆಕ್ ಇನ್ ಮತ್ತು ಬೋರ್ಡಿಂಗ್ ಮಾಡಲಾಗುತ್ತಿತ್ತು. ಹೀಗಾಗಿ ಪ್ರಯಾಣಿಕ ಸುಮಾರು 3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬ್ಯಾಗ್, ಲಗೇಜ್‌ಗಳನ್ನ ಕೈಯಲ್ಲಿಡಿದು ಸುಸ್ತಾಗಿ ನಿಂತಿದ್ದ ದೃಶ್ಯಗಳು ಕಂಡುಬಂದವು.
 


 
		 
		 
		 
		 
		
 
		 
		 
		 
		