ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಚೋದನಾತ್ಮಕ ಪೋಸ್ಟ್ ಹಾಕುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಅಂತರ್ಜಾಲ ಪ್ರಾಧಿಕಾರದ ಎ ಆನಂದ ಎಂಬವರು ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಿಸಿದ್ದು, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ವಿನಕಾರಣ ಹೇಳಿಕೆ ನೀಡಿ ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
Advertisement
ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಡಿಯೋ ಕುರಿತು ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ನೈಜವಲ್ಲದ ಪೋಸ್ಟ್ ಗಳನ್ನು ಫೇಸ್‍ಬುಕ್ ನಲ್ಲಿ ಹಾಕಿ ಪ್ರಚೋದನೆ ನೀಡುತ್ತಾರೆ. ಅಲ್ಲದೇ ದೇಶದ ವೀರ ವನಿತೆಯರ ಚಾರಿತ್ರ್ಯ ಹರಣ ಮಾಡುವಂತಹ ಪೋಸ್ಟ್ ಗಳನ್ನು ಹಾಕಿದ್ದು, ಈ ಕುರಿತು ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುಬೇಕು. ಪ್ರಕರಣದ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ನಂತರ ದಿನಗಳಲ್ಲಿ ಹಾಜರು ಪಡಿಸುವುದಾಗಿ ದೂರಿನಲ್ಲಿ ಮನವಿ ಮಾಡಿದ್ದಾರೆ. (ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!)
Advertisement
ಪ್ರತಾಪ್ ಸಿಂಹ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 66 ಸಿ, ಐಪಿಸಿ ಸೆಕ್ಷನ್ ಗಳಾದ 153ಎ(ಸಮಾಜದ ಸಾಮರಸ್ಯ ಹಾಳು ಮಾಡುವುದು), 295ಎ( ಕೋಮು ಸೌಹಾರ್ದಕ್ಕೆ ಧಕ್ಕೆ), 505(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.