ನವದೆಹಲಿ: ನಿತ್ಯ 5 ಸಾವಿರ ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿದ ಶಿಫಾರಸ್ಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿ ಹಿಡಿದಿದ್ದು ಭವಿಷ್ಯದಲ್ಲಿ ರಾಜ್ಯದ ಕಾವೇರಿ (Kaveri River) ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಿಸುವ ಸನ್ನಿವೇಶ ನಿರ್ಮಾಣವಾಗಿದೆ.
ತಮಿಳುನಾಡಿಗೆ (Tamil Nadu) ನೀರು ಹರಿಸುವ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಗಳವಾರ ದೆಹಲಿಯಲ್ಲಿ ಸಭೆ ನಡೆಸಿತು. ಸಭೆಯಲ್ಲಿ ತಮಿಳುನಾಡು ಪರ ಹಾಜರಾಗಿದ್ದ ಎಸಿಎಸ್ ಸಂದೀಪ್ ಸಕ್ಸೇನಾ ಕರ್ನಾಟಕ ಕೂಡಲೇ 50.10 ಟಿಎಂಸಿ ನೀರು ಹರಿಸಬೇಕು ಎಂದು ಹೇಳಿದರು. 80.37 ಟಿಎಂಸಿ ನೀರು ಕರ್ನಾಟಕ (Karnataka) ಹರಿಸಬೇಕಿತ್ತು. ಆದರೆ ಜೂನ್ 1 ರಿಂದ ಅಗಸ್ಟ್ 27 ವರೆಗೂ 30.17 ಟಿಎಂಸಿ ನೀರು ಹರಿಸಿದ್ದು ಕೂಡಲೇ ಬಾಕಿ ನೀರು ಬಿಡಬೇಕು ಎಂದು ಒತ್ತಡ ಹೇರಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಪರ ಭಾಗಿಯಾಗಿದ್ದ ಎಸಿಎಸ್ ರಾಕೇಶ್ ಸಿಂಗ್, 47% ಮಳೆಯ ಕೊರತೆ ಇದೆ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಇಲ್ಲ, ಕರ್ನಾಟಕದ ಗೇಟುಗಳನ್ನು ತೆರೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಕರ್ನಾಟಕ ನೀರು ನೀಡಿದರೆ ಕುಡಿಯುವ ನೀರಿಗೂ ಕ್ಷಾಮ ಎದುರಾಗಲಿದೆ. ಕರ್ನಾಟಕ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಮಾತ್ರ ಸಮರ್ಥವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು
ಕರ್ನಾಟಕದ ವಾದಕ್ಕೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ನಿತ್ಯ 24,000 ಕ್ಯೂಸೆಕ್‌ನಂತೆ 10 ದಿನಗಳ ಕಾಲ ಬಿಡಬೇಕು ಎಂದು ಒತ್ತಾಯಿಸಿತು. ಇದಕ್ಕೆ ಮಧ್ಯಪ್ರವೇಶ ಮಾಡಿದ ಪ್ರಾಧಿಕಾರದ ಅಧಿಕಾರಿಗಳು ನೀರು ಬಿಡಲು ಸಾಧ್ಯವಿಲ್ಲ ಎನ್ನಲಾಗದು ಈ ಹಿನ್ನೆಲೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶದನ್ವಯ ನೀರು ಹರಿಸಿ ಎಂದು ಆದೇಶಿಸಿತು.
ಪ್ರಾಧಿಕಾರ ಈ ಆದೇಶಕ್ಕೆ ಕರ್ನಾಟಕ, ತಮಿಳುನಾಡು ಎರಡು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿರುವ ವಿಚಾರಣೆ ವೇಳೆ ತಮ್ಮ ವಾದವನ್ನು ಮತ್ತೊಮ್ಮೆ ಪ್ರತಿಪಾದಿಸುವ ನಿರೀಕ್ಷೆಗಳಿದೆ. ಈ ನಡುವೆ ಪ್ರಾಧಿಕಾರ ಇದೇ ಆದೇಶವನ್ನು ಅಂಕಿ ಅಂಶಗಳ ಸಮೇತ ಸುಪ್ರೀಂಕೋರ್ಟ್‌ಗೆ ವರದಿ ನೀಡಲಿದೆ. ಇದನ್ನೂ ಓದಿ: ನವೆಂಬರ್ 5 ಕೆ-ಸೆಟ್ ಪರೀಕ್ಷೆ: ಕೆಇಎ
Web Stories