ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

Public TV
3 Min Read
venkat

ಸಿ.ವಿ ಶಿವಶಂಕರ್ (C.v Shivashankar) ಕನ್ನಡ ಚಿತ್ರರಂಗ ಕಂಡ ಖ್ಯಾತ ಗೀತರಚನೆಕಾರರು. ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು. ಮಿನುಗುತಾರೆ ಕಲ್ಪನಾ, ಮಂಜುಳಾ, ಉದಯ್ ಕುಮಾರ್, ನರಸಿಂಹರಾಜು, ತೂಗುದೀಪ್ ಶ್ರೀನಿವಾಸ್, ರಾಜೇಶ್ ಹೀಗೆ ಅವತ್ತಿನ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದವರು. ಮನೆಕಟ್ಟಿ ನೋಡು, ಪದವೀಧರ, ನಮ್ಮ ಊರು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟವರು. ಅಷ್ಟಕ್ಕೂ, ಇವತ್ತು ಸಿ.ವಿ ಶಿವಶಂಕರ್ ಅವರ ಬಗ್ಗೆ ಮಾತನಾಡೋದಕ್ಕೆ ಕಾರಣ ಅವರ ಪುತ್ರ ವೆಂಕಟ್ ಭಾರದ್ವಾಜ್.

sharanya shetty 1

ವೆಂಕಟ್ ಭಾರದ್ವಾಜ್ (Venkat Bharadwaj)ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಸಿ.ವಿ ಶಿವಶಂಕರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಐಟಿ ಕಂಪೆನಿಗಳಲ್ಲಿ ಸೇಲ್ಸ್ ಹೆಡ್ ಆಗಿ ಕೆಲಸ ಮಾಡಿಕೊಂಡು ನೂರಾರು ದೇಶ ಸುತ್ತಿರೋ ಇವರು, ಕೊನೆಗೆ ಸಿನಿಮಾ ಫೀಲ್ಡಿಗೆ ಬಂದಿಳಿದಿದ್ದಾರೆ. ತಂದೆಯಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಂಪಿರ್ವೆ, ಆಮ್ಲೆಟ್, ಎ ಡೇ ಇನ್ ದಿ ಸಿಟಿ, ಬಬ್ಲೂಷ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಕೆಂಪಿರ್ವೆ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ‘ನಗುವಿನ ಹೂಗಳ ಮೇಲೆ’ ಎಂಬ ಪ್ರೇಮಕಥಾಹಂದರವುಳ್ಳ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

sharanya shetty

‘ಭಾಗ್ಯವಂತರು’ ಚಿತ್ರದ ಹಾಡಿನ ಚರಣದ ಸಾಲನ್ನ ಸಿನಿಮಾ ಶೀರ್ಷಿಕೆಯನ್ನಾಗಿಸಿದ ನಿರ್ದೇಶಕರು, ಅಣ್ಣಾವ್ರ ಸಾಕ್ಷಾತ್ಕಾರ ಸಿನಿಮಾದಿಂದ ಸ್ಪೂರ್ತಿ ಪಡೆದು ‘ನಗುವಿನ ಹೂಗಳ ಮೇಲೆ’ ಸಿನಿಮಾದ ಕಥೆ ಹೆಣೆದರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಿಜವಾದ ಪ್ರೀತಿ ಅಂದರೆ ಯಾವುದು? ಹೇಗಿರುತ್ತೆ ಅನ್ನೋದನ್ನ ತೆರೆಮೇಲೆ ಕಟ್ಟಿಕೊಟ್ಟಿರುವುದಾಗಿ ಹೇಳಿಕೊಂಡರು. ಸೆನ್ಸಾರ್ ಮಂಡಳಿಯಿಂದ ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ಕಂಟೆಂಟ್, ಮೇಕಿಂಗ್, ಸಾಂಗ್ಸ್, ಆರ್ಟಿಸ್ಟ್‌ಗಳ ಪರ್ಫಾಮೆನ್ಸ್ ಎಲ್ಲವೂ ಅದ್ಭುತವಾಗಿರುವುದಾಗಿ ತಿಳಿಸಿದರು. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

sharanya shetty

ಇನ್ನೂ ‘ನಗುವಿನ ಹೂಗಳ ಮೇಲೆ’ ಚಿತ್ರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಮಟ್ಟಿಗೆ ಸೌಂಡ್ ಮಾಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ರೀಚ್ ಆಗುವಲ್ಲಿ ಯಶಸ್ವಿ ಕೂಡ ಆಗಿದೆ. ಗೊತ್ತಿಲ್ಲ ಯಾರಿಗೂ, ಇರಲಿ ಬಿಡು ಈ ಜೀವ ನಿನಗಾಗಿ ಗೀತೆಗಳು ಚಿತ್ರಪ್ರೇಮಿಗಳ ಹೃದಯ ಗೆದ್ದಿವೆ. ಹೀರೋ ಅಭಿದಾಸ್, ಹೀರೋಯಿನ್ ಶರಣ್ಯಾ ಶೆಟ್ಟಿ (Sharanya Shetty) ಕಾಂಬಿನೇಷನ್ ಕಿಕ್ಕೇರಿಸುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ಈ ಜೋಡಿ ನೋಡೋದಕ್ಕೆ ಯುವಪ್ರೇಮಿಗಳು ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ಇವರಿಬ್ಬರಿಗೂ ಇದು ಸ್ಪೆಷಲ್ ಸಿನಿಮಾ. ಯಾಕಂದ್ರೆ, ಅಭಿದಾಸ್ ಹಾಗೂ ಶರಣ್ಯಾ ಇಬ್ಬರು ಕೂಡ ಈ ಚಿತ್ರದಿಂದ ಸೋಲೋ ಹೀರೋ, ಹೀರೋಯಿನ್ ಆಗಿ ಪರಿಚಯ ಆಗ್ತಿದ್ದಾರೆ. ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳನ್ನ ಅಟ್ರ‍್ಯಾಕ್ಟ್ ಮಾಡುವಲ್ಲಿ ಗೆಲುವು ಕಂಡಿದ್ದಾರೆ.

sharanya shetty 2

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಪ್ರಮೋದ್ ಮರವಂತೆ, ಕಬ್ಬಡಿ ನರೇಂದ್ರ ಬಾಬು, ಚಿದಂಬರ ನರೇಂದ್ರ, ಕಿರಣ್ ನಾಗರಾಜ್ ಸಾಹಿತ್ಯ ಗೀಚಿದ್ದಾರೆ. ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ತ್ರಾಸಿ ಬೀಚ್, ಹುಲಿಕಲ್ ಘಾಟ್, ಮಾಸ್ತಿಗುಡಿ, ಶಿವಮೊಗ್ಗ, ತೀರ್ಥಹಳ್ಳಿ, ಮಲೆನಾಡು, ಮರವಂತೆ ಬೀಚ್ ಸೇರಿದಂತೆ ಹಲೆವೆಡೆ ‘ನಗುವಿನ ಹೂಗಳ ಮೇಲೆ’ ಸಿನಿಮಾ ಚಿತ್ರೀಕರಣಗೊಂಡಿದೆ.

sharanya shetty

ಅಭಿದಾಸ್ (Abhidas) ಮತ್ತು ಶರಣ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರ ಮೂಡಿಬಂದಿದೆ. ಈ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಇದೇ ಫೆ.9ರಂದು ಈ ಚಿತ್ರ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

Share This Article