– ದಂಗಾದ ಕಸ್ಟಮ್ಸ್ ಅಧಿಕಾರಿಗಳು
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಇತಿಹಾಸದಲ್ಲೇ ಇಂಥ ಪ್ರಕರಣವನ್ನ ನೋಡಿರಲಿಲ್ಲ. ಯಾಕೆಂದರೆ ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8.31 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಮಹಿಳೆಯೊಬ್ಬಳ ಗುಪ್ತಾಂಗದಿಂದ ವಶಪಡಿಸಿಕೊಳ್ಳಲಾಗಿದೆ. ಗುಟೇಮಾಲಾ ದೇಶದ ಮಹಿಳೆಯ ಗುಪ್ತಾಂಗದಲ್ಲಿದ್ದ ಡ್ರಗ್ಸ್ ಕಂಡು ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಬಂಧಿತ ವಿದೇಶಿ ಮಹಿಳೆ. ಈಕೆ 150 ಕೊಕೇನ್ ಮಾತ್ರೆಗಳನ್ನು ಟ್ಯೂಬ್ ರೀತಿ ಮಾಡಿ ಗಪ್ತಾಂಗದಲ್ಲಿ ಇಟ್ಟುಕೊಂಡಿದ್ದಳು. ಇಥಿಯೋಪಿಯ ಏರ್ ಲೈನ್ಸ್ ET690 ಮೂಲಕ ಅಡಿಸ್ ಅಬಾಬದಿಂದ ಬೆಂಗಳೂರಿಗೆ ಬಂದಿದ್ದಳು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಕೊಕೇನ್ ಪತ್ತೆಯಾಗಿದೆ.
ಸಣ್ಣ ಸಣ್ಣ ಮಾತ್ರೆಗಳ ರೀತಿಯಲ್ಲಿ ಅದಕ್ಕೆ ಪ್ಲಾಸ್ಟಿಕ್ ರೀತಿಯ ವಸ್ತುವಿನಿಂದ ಕವರ್ ಮಾಡಿ, ಕೊಕೇನ್ ಶೇಖರಣೆ ಮಾಡಿಟ್ಟುಕೊಂಡಿದ್ದಳು. 1.385 ಗ್ರಾಂ ಕೊಕೇನ್ ಮಹಿಳೆಯ ಗುಪ್ತಾಂಗದಲ್ಲಿ ಪತ್ತೆಯಾಗಿದ್ದು, NDPS ACT ಅಡಿ ಈ ವಿದೇಶಿ ಮಹಿಳೆಯ ಬಂಧನವಾಗಿದೆ.
ಅಂದಹಾಗೆ ಮಹಿಳೆಯೊಬ್ಬಳು ದೇಹದೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿರೋದು ಇದೇ ಮೊದಲು. ಈಕೆ ವಿಮಾನ ಏರುವ ಮುಂಚೆಯಿಂದ ಅಂದರೆ ಸುಮಾರು ಎರಡು ದಿನಗಳಿಂದ ತನ್ನ ಗುಪ್ತಾಂಗದಲ್ಲೇ ಕೊಕೇನ್ ಇಟ್ಟುಕೊಂಡಿದ್ದಳು. ಸದ್ಯ ಈಕೆಯನ್ನ ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.