– 54 ವರ್ಷದ ನಾಯಕ ತನ್ನನ್ನು ಯುವಕ ಅಂತ ಹೇಳಿಕೊಳ್ತಾರೆ ಎಂದು ಲೇವಡಿ
ನವದೆಹಲಿ: ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ 77 ಬಾರಿ ಸಂವಿಧಾನವನ್ನು ತಿದ್ದುಪಡಿ (constitutional amendment) ಮಾಡಿದೆ. ಇದರೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಸಭೆಯಲ್ಲಿಂದು ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ (Congress Leaders) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಶ್ವದಲ್ಲಿ ಎಲ್ಲೂ ಇಲ್ಲದ ಸಂವಿಧಾನ ನಮ್ಮದು, ಸಾಕಷ್ಟು ಪ್ರಕ್ರಿಯೆ ಬಳಿಕ ಸಂವಿಧಾನ ಅಂತಿಮಗೊಳಿಸಲಾಯಿತು. ನಮ್ಮ ದೇಶದ ಸಂವಿಧಾನವು ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡಿದೆ. ನೋಡುವ ದೃಷ್ಟಿ ಕೋನ ಬದಲಾಗಬೇಕು, ವಿದೇಶ ಕಣ್ಣುಗಳಲ್ಲಿ ನೋಡಿದ್ರೆ ತಪ್ಪಾಗಿ ಕಾಣುತ್ತದೆ. ಒಳ್ಳೆಯ ಅಂಶಗಳಿದ್ದರೆ ಅವಳವಡಿಸಿಕೊಳ್ಳಲು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ. ನಾವು ನಮ್ಮ ಇತಿಹಾಸ ಗಮನದಲ್ಲಿಟ್ಟುಕೊಂಡು ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ. ವೇದ ಉಪನಿಷತ್ತ, ಚಾಣಕ್ಯ ನೀತಿ, ರಾಮಯಣ, ಮಹಾಭಾರತದಲ್ಲಿರುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂವಿಧಾನ ಅದನ್ನು ಜಾರಿ ಮಾಡುವುವರ ಮೇಲೆ ಒಳ್ಳೆಯ ಕೆಟ್ಟದು ನಿರ್ಧಾರವಾಗುತ್ತದೆ. ಸಮಯದ ಜೊತೆಗೆ ಎಲ್ಲವೂ ಬದಲಾಗಬೇಕು. ಹೀಗಾಗಿ ಆರ್ಟಿಕಲ್ 370 ಯನ್ನು ರದ್ದು ಮಾಡಲಾಯಿತು. 54 ವರ್ಷ ವಯಸ್ಸಿನ ನಾಯಕ ತನ್ನನ್ನು ಯುವ ನಾಯಕ ಎಂದು ಹೇಳಿಕೊಳ್ತಿದ್ದಾರೆ, ನಾವು ಸಂವಿಧಾನ ಬದಲಾಯಿಸುತ್ತಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಂವಿಧಾನ ತಿದ್ದುಪಡಿಗೆ ಸಂವಿಧಾನವೇ ಅವಕಾಶ ನೀಡಿದೆ. ಕಾಂಗ್ರೆಸ್ ಅವಧಿಯಲ್ಲಿ 77 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ, ಬಿಜೆಪಿ 22 ಬಾರಿ ಮಾತ್ರ ತಿದ್ದುಪಡಿ ಆಗಿದೆ. ಯಾರು ಹೇಗೆ ತಿದ್ದುಪಡಿ ಮಾಡಿದರು? ಅದೆಷ್ಟು ಮುಖ್ಯವಾಗಿತ್ತು ಎನ್ನುವುದು ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ
ವಾಕ್ ಸ್ವಾತಂತ್ರ‍್ಯವನ್ನು ಹತ್ತಿಕ್ಕಲು ಕಾಂಗ್ರೆಸ್ ಮೊದಲ ತಿದ್ದುಪಡಿ ಮಾಡಿತು ಎಂದರು. ಕಾಂಗ್ರೆಸ್ ಅವಧಿಯಲ್ಲಿನ ಕಾನೂನು ತಿದ್ದುಪಡಿ ಉಲ್ಲೇಖಿಸುತ್ತಿದ್ದಂತೆ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಯಿತು. ಆಕ್ಷೇಪದ ನಡುವೆ ಮಾತು ಮುಂದುವರಿಸಿದ ಅಮಿತ್ ಶಾ, ಸಂವಿಧಾನ ತಿದ್ದುಪಡಿ ಮೂಲಕ ಇಂದಿರಾ ಗಾಂಧಿ ನಾಗರಿಕರ ಮೌಲ್ಯಿಕ ಅಧಿಕಾರ ಕಿತ್ತುಕೊಂಡರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದರು, ಹೈಕೋರ್ಟ್ ಆದೇಶ ಹತ್ತಿಕ್ಕಲು ತಿದ್ದುಪಡಿ ಮಾಡಿದರು ಎಂದು ಕಿಡಿ ಕಾರಿದರು.
ಇವಿಎಂ ಮೇಲೆ ವಿಪಕ್ಷ ನಾಯಕರು ಆರೋಪ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ ಗೆದ್ದಿತು, ಜಾರ್ಖಂಡ್ ನಲ್ಲಿ ವಿರೋಧ ಪಕ್ಷಗಳು ಗೆದ್ದವು. ಸೋತಾಗ ಇವಿಎಂಯನ್ನು ತೆಗಳುವ ನಾಯಕರು ಗೆದ್ದಾಗ ಹೊಸ ಬಟ್ಟೆ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅವರಿಗೆ ಸ್ವಲ್ಪವಾದರೂ ನಾಚಿಕೆ ಇದಿಯೇ? ಅದೇ ರೀತಿ ನ್ಯಾಯಾಲಯದ ಆದೇಶವನ್ನು ಇಂದಿರಾ ಹತ್ತಿಕ್ಕಿದರು. ಅಲ್ಲದೇ ನಾಗರಿಕರಿಗೆ ಸಂವಿಧಾನ ನೀಡುವ ಅಧಿಕಾರ ಕಿತ್ತುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿದೆ. ಇದನ್ನೂ ಓದಿ: ʻಒಂದು ದೇಶ, ಒಂದು ಚುನಾವಣೆʼ ಮಸೂದೆ ಲೋಕಸಭೆಯಲ್ಲಿ ಮಂಡನೆ – ಮೊದಲ ಬಾರಿಗೆ ಇ-ವೋಟಿಂಗ್ ಸಿಸ್ಟಂ ಬಳಕೆ!
ಜಿಎಸ್‌ಟಿಯನ್ನು ತರಲು ಬಿಜೆಪಿ ತಿದ್ದುಪಡಿ ಮಾಡಿತು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ತಿದ್ದುಪಡಿ ಮಾಡಿತು, ಜನರ ಒಳ್ಳೆಯ ಕಾರಣಕ್ಕೆ ಮೋದಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತು. ರಾಜ್ಯಗಳಿಗೆ ಪರಿಹಾರ ನೀಡದೇ ಜಿಎಸ್‌ಟಿ ತರಲು ಹೊರಟಿತ್ತು. ಅದಕ್ಕಾಗಿ ಮೋದಿ ಅವರು ಕಾಂಗ್ರೆಸ್ ಜಿಎಸ್‌ಟಿಯನ್ನು ವಿರೋಧಿಸಿದ್ದರು. ಮೋದಿ ಅವರು ಪರಿಹಾರ ಜೊತೆಗೆ ಜಿಎಸ್‌ಟಿ ಜಾರಿಗೊಳಿಸುವ ಕೆಲಸ ಮಾಡಿದರು ಎಂದು ಶ್ಲಾಘಿಸಿದರು. ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್
ಮಹಿಳೆಯರಿಗೆ ಮೀಸಲಾತಿ ನೀಡಲು ʻಮಹಿಳಾ ವಂದನʼ ಅಧಿನಿಯಮ ಜಾರಿಗಾಗಿ ತಿದ್ದುಪಡಿ ಮಾಡಲಾಯಿತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತ್ರಿವಳಿ ತಲಾಖ್‌ಗಾಗಿ ತಿದ್ದುಪಡಿ ತರಲಾಯಿತು. ಆದ್ರೆ ವೋಟ್ ಬ್ಯಾಂಕ್‌ಗಾಗಿ ನಾವು ಮಾಡಲಿಲ್ಲ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡಲು ತಿದ್ದುಪಡಿ ಮಾಡಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಿದ್ದುಪಡಿ ತರಲಾಯಿತು. ಬ್ರಿಟಿಷ್ ಕಾನೂನು ರದ್ದು ಮಾಡಿ, ಹೊಸ ಭಾರತೀಯ ನೀತಿ ಸಂಹಿತೆ ಜಾರಿಗೆ ತರಲು ತಿದ್ದುಪಡಿ ಮಾಡಿದೆವು. ಈ ಕಾರಣಗಳಿಗಾಗಿ ನರೇಂದ್ರ ಮೋದಿ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿತು ಎಂದು ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆಗಳನ್ನ ಬಣ್ಣಿಸಿದರು.