ಪಾರಿವಾಳ ಹಿಡಿಯಲು ಹೋಗಿ ಕರೆಂಟ್ ಶಾಕ್ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

ಬೆಂಗಳೂರು: ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು (Pigeon) ಹಿಡಿಯಲು ಹೋಗಿ ಕರೆಂಟ್ ಶಾಕ್‌ಗೆ (Current Shock) ಒಳಗಾಗಿ ಆಸ್ಪತ್ರೆ ಸೇರಿದ್ದ ಮತ್ತೊಬ್ಬ ಬಾಲಕ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಚಂದ್ರು (13) ಮೃತಪಟ್ಟ ಬಾಲಕ. ಈತನಿಗೂ ಶೇ.74 ರಷ್ಟು ದೇಹ ಸುಟ್ಟು ಗಾಯಗಳಾಗಿತ್ತು. ಕಳೆದ 7 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು
ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು (Pigeon) ಹಿಡಿಯಲು ಹೋಗಿ ಚಂದ್ರು ಹಾಗೂ ಸುಪ್ರೀತ್ ಕರೆಂಟ್ ಶಾಕ್‌ಗೆ ಒಳಗಾಗಿದ್ದರು. ಮನೆ ಮಾಲೀಕರು ಮಹಡಿಯನ್ನು ಹತ್ತಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದರೂ ಕೂಡಾ ಮಕ್ಕಳು ಪಾರಿವಾಳದ ಆಸೆಗೆ ಮನೆ ಮೇಲೆ ಹತ್ತಿದ್ದರು. ಈ ವೇಳೆ ಮಕ್ಕಳು ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವೈರ್ ಅನ್ನು ಮುಟ್ಟಿದ್ದರು. ಈ ವೇಳೆ ಮಕ್ಕಳಿಗೆ ಕರೆಂಟ್ ಶಾಕ್ ತಗುಲಿತ್ತು.
ಇಬ್ಬರು ಬಾಲಕರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಸುಪ್ರೀತ್ ಕೆಲದಿನಗಳ ಹಿಂದಷ್ಟೇ ಕೊನೆಯುಸಿರೆಳೆದಿದ್ದ. ಇಂದು ಚಂದ್ರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲಕರಿಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ