– ದಕ್ಷಿಣ ಕನ್ನಡ ಸೇರಿ ದೇಶದ ಅಡಿಕೆ ಬೆಳೆಗಾರರ ಪರ ಸದನದಲ್ಲಿ ಧ್ವನಿಯೆತ್ತಿದ ಸಂಸದ
ನವದೆಹಲಿ: ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತಕ್ಕೆ (India) ದೊಡ್ಡ ಪ್ರಮಾಣದಲ್ಲಿ ಅಡಿಕೆ (Arecanut) ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Brijesh Chowta) ಅವರು ಸಂಸತ್ತಿನಲ್ಲಿ ಧ್ವನಿಯೆತ್ತಿದ್ದಾರೆ.
ಲೋಕಸಭೆಯಲ್ಲಿ (Lokasaba) ನಿಯಮ 377ರ ಅಡಿಯಲ್ಲಿ ಈ ತುರ್ತು ವಿಚಾರವನ್ನು ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ ಅವರು ನೆರೆಯ ಸಣ್ಣ ದೇಶಗಳಿಂದ ಸುಂಕ ಮುಕ್ತ ಅಡಿಕೆ ಆಮದಿನಿಂದಾಗಿ ಕರ್ನಾಟಕವು ಸೇರಿ ನಮ್ಮ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿರುವುದಾಗಿ ಚಳಿಗಾಲ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಸದನದ ಗಮನ ಸೆಳೆದಿದ್ದಾರೆ.
ನೆರೆಯ ಈ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ವ್ಯಾಪಾರ-ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಭಾರತ ಸರ್ಕಾರವು ಸುಂಕ ಮುಕ್ತ(ಡಿಎಫ್‌ಕ್ಯೂಎಫ್) ವ್ಯವಸ್ಥೆಯಡಿ ಶೂನ್ಯ ಸುಂಕ ವಿಧಿಸುತ್ತಿದೆ. ಆದರೆ, ಈ ಸುಂಕ ಮುಕ್ತ ವ್ಯವಸ್ಥೆಯನ್ನು ಈ ದೇಶಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಅದರಿಂದ ನಮ್ಮ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯೂ ಸೇರಿ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಅಪಾಯವುಂಟು ಮಾಡುತ್ತಿದೆ. ಅಷ್ಟೇಅಲ್ಲ, ಈ ಶೂನ್ಯ ಸುಂಕ ವ್ಯವಸ್ಥೆಯಿಂದಾಗಿ ಶ್ರೀಲಂಕಾ, ಭೂತಾನ್‌ನಂಥ ದೇಶಗಳಿಂದ ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಅಡಿಕೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ. ಇದು ಸಹಜವಾಗಿಯೇ ನಮ್ಮ ದೇಶದ ಅಡಿಕೆ ದರ ಕುಸಿತವಾಗಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದೆ. ಉದಾಹರಣೆಗೆ 2023ರ ಸೆಪ್ಟಂಬರ್‌ನಿಂದ 2024ರ ಆಗಸ್ಟ್ ವರೆಗಿನ ಅವಧಿಯಲ್ಲಿ ಭೂತಾನ್‌ನಿಂದ ಶೇ.57ರಷ್ಟು, ಮಾಯನ್ಮಾರ್‌ನಿಂದ ಶೇ.39ರಷ್ಟು ಹಾಗೂ ಶ್ರೀಲಂಕಾದಿಂದ ಶೇ.2ರಷ್ಟು ಕಳಪೆ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕ್ಯಾ. ಚೌಟ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ತಂಬಾಕು – ಹೊಸ 2 ಮಸೂದೆಯಲ್ಲಿ ಏನಿದೆ?

ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, 2023-24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದಿಸಿದೆ. ಕರ್ನಾಟಕ (Karnataka) ಒಂದೇ ಸುಮಾರು 10 ಲಕ್ಷ ಟನ್ ಅಡಿಕೆ ಉತ್ಪಾದಿಸಿದೆ. ನಮ್ಮ ದೇಶದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಅಡಿಕೆ ಉತ್ಪಾದನೆಯಾಗುತ್ತಿರುವಾಗ, ನೆರೆಯ ಕಡಿಮೆ ಹಿಂದುಳಿದ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕ ಪಾವತಿ ವ್ಯವಸ್ಥೆಯಡಿ ಆಮದು ಮಾಡುವ ಅಗತ್ಯವಿಲ್ಲ. ಇದರಿಂದ ನಮ್ಮ ಅಡಿಕೆಯ ದರ ಹಾಗೂ ಬೇಡಿಕೆ ಕುಸಿದು ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೆಚ್ಚು ಅಡಿಕೆ ಬೆಳೆಯುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರನ್ನು ತೀವ್ರವಾಗಿ ಬಾಧಿಸಿದೆ ಎಂದು ಕ್ಯಾ. ಚೌಟ ಅವರು ಈ ಗಂಭೀರ ಸಮಸ್ಯೆ ಪರಿಣಾಮವನ್ನು ಸದನದ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಈ ವರ್ಷದಲ್ಲೇ ಕಡಿಮೆ, ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಯಾವ ರಾಜ್ಯದ ಪಾಲು ಎಷ್ಟು?
ಸಾಮಾನ್ಯವಾಗಿ ಹೊರ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವಾಗ ಶೇ.100ರಷ್ಟು ಮೂಲ ಸುಂಕ ವಿಧಿಸಲಾಗುತ್ತದೆ. ಆದರೆ, ಈ ಸುಂಕ ಮುಕ್ತ ವ್ಯವಸ್ಥೆಯು ನೆರೆದೇಶಗಳಿಂದ ಅಡಿಕೆಯಂಥ ಉತ್ಪನ್ನ ಸುಲಭವಾಗಿ ಭಾರತವನ್ನು ಪ್ರವೇಶಿಸಿ ನಮ್ಮ ರೈತರಿಗೆ ದೊಡ್ಡ ಅಪಾಯವುಂಟು ಮಾಡಿದೆ. ಈ ಸುಂಕ ಮುಕ್ತ ವಿನಾಯಿತಿಯು ಬೆಲೆ ಕುಸಿತ, ಮಾರುಕಟ್ಟೆ ಅಸ್ಥಿರತೆ ಮತ್ತು ಈ ಅಡಿಕೆ ಬೆಳೆಯನ್ನು ಅವಲಂಬಿಸಿ ಜೀವನೋಪಾಯ ನಡೆಸುತ್ತಿರುವ ಲಕ್ಷಾಂತರ ಕೃಷಿಕರನ್ನು ಆರ್ಥಿಕ ಮುಗ್ಗಟ್ಟಿಗೆ ದೂಡುತ್ತಿದೆ ಎಂದು ಸಂಸದರು ಮನವರಿಕೆ ಮಾಡಿದ್ದಾರೆ.
ನೆರೆ ದೇಶಗಳಿಂದ ಕಡಿಮೆ ಗುಣಮಟ್ಟದ ಸುಂಕ ಮುಕ್ತ ಅಡಿಕೆ ಆಮದಿನಿಂದಾಗುತ್ತಿರುವ ಈ ಸಮಸ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿರುವ ಸಂಸದ ಕ್ಯಾ. ಚೌಟ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಸುಂಕ ಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆಯನ್ನು ಹೊರಗಿಡಬೇಕು ಹಾಗೂ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರುಸ್ಥಾಪಿಸಬೇಕು. ಆ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಅಡಿಕೆ ಬೆಳೆಯುವ ಭಾಗದ ಲಕ್ಷಾಂತರ ರೈತರ ಹಿತಕಾಪಾಡುವಂತೆ ಮನವಿಯಲ್ಲಿ ಸಂಸದರು ಒತ್ತಾಯಿಸಿದ್ದಾರೆ.

