ಉಡುಪಿ: ಟಿಪ್ಪು ಜಯಂತಿ ಕೈಬಿಟ್ಟಿರುವ ಯಡಿಯೂರಪ್ಪ ಸರ್ಕಾರ ಸಂತ ಶಿಶುನಾಳ ಶರೀಫರ ಜಯಂತಿ ಆಚರಿಸಲು ಚಿಂತನೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡುವ ಬಗ್ಗೆ ನನಗೆ ಅಪೇಕ್ಷೆ ಇದೆ. ಶಿಶುನಾಳ ಶರೀಫರು ಹಿಂದೂ ಮುಸಲ್ಮಾನರು ಒಪ್ಪಿಕೊಂಡ ವ್ಯಕ್ತಿ. ಎರಡೂ ಧರ್ಮ ಖುಷಿ ಪಡುವ ಆಚರಣೆ ಇದಾಗಬಹುದು. ಡಾ.ಎಪಿಜೆ ಅಬ್ದುಲ್ ಕಲಾಂ ಜಯಂತಿಯನ್ನೂ ಮಾಡಬಹುದು. ಕಲಾಂ ದೇಶದ ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಟ್ಟ ವ್ಯಕ್ತಿ. ಮೊದಲು ರಾಜ್ಯಾದ್ಯಂತ ಎಲ್ಲ ಜಯಂತಿ ಆಚರಣೆಗಳ ಸ್ವರೂಪ ಸಂಗ್ರಹ ಮಾಡುತ್ತೇವೆ ಬಳಿಕ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಎಲ್ಲ ಜಯಂತಿಗಳು ರಾಜಕೀಯಕರಣಗೊಳ್ಳುವುದರಿಂದ ಎಲ್ಲ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುತ್ತೇನೆ. ನಂತರ ಕ್ಯಾಬಿನೆಟ್‍ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಸಾಹಿತಿ ಎಸ್.ಎಲ್.ಭೈರಪ್ಪ ದಸರಾ ಉದ್ಘಾಟನಾ ಭಾಷಣಕ್ಕೆ ಪ್ರಗತಿಪರರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿಟಿ ರವಿ, ನಾನೂ ಭೈರಪ್ಪ ಅವರ ಪಕ್ಕದಲ್ಲೇ ಇದ್ದೆ. ಅವರು ತಪ್ಪೇನೂ ಮಾತನಾಡಿಲ್ಲ. ನಾಡದೇವಿಗೆ ಕೈ ಮುಗಿಯದ ನಾಸ್ತಿಕರಿಗಿಂತ ತಮ್ಮ ಶ್ರದ್ಧೆ ತೋರ್ಪಡಿಸಿದ ಭೈರಪ್ಪ ಕೋಟಿ ಪಾಲು ಮೇಲಿದ್ದಾರೆ. ನಾಸ್ತಿಕರನ್ನು ಕರೆದು ಹಿಂದಿನ ಸರ್ಕಾರ ಅಪಮಾನ ಮಾಡಿತ್ತು. ಭೈರಪ್ಪ ಶಬರಿಮಲೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದ್ದಾರೆ ಅಷ್ಟೇ. ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದೇನೂ ಹೇಳಿಲ್ಲ. ನಮ್ಮ ದೇಶದಲ್ಲಿ ಗಂಡು ದೇವತೆಗಳಿಗಿಂತ ಹೆಣ್ಣು ದೇವತೆಗಳೇ ಹೆಚ್ಚಿದ್ದಾರೆ. ಹೆಣ್ಣು ದೇವತೆಯೇ ಇಲ್ಲದಂತಹಾ ಮತದವರು ಅವರ ಬಗ್ಗೆ ಯೋಚನೆ ಮಾಡಲಿ ಸಾಕು ಎಂದು ತಿರುಗೇಟು ನೀಡಿದ್ದಾರೆ.
ಧ್ವನಿ ಎತ್ತುತ್ತೇವೆ
ಹತ್ತು ರಾಜ್ಯಗಳಲ್ಲಿ ಮಳೆಯಿಂದ ಹಾನಿಯಾಗಿದೆ, ಹತ್ತೂ ರಾಜ್ಯಕ್ಕೆ ಮಧ್ಯಂತರ ಪರಿಹಾರ ಕೊಟ್ಟಿದ್ದಾರೆ, ಪೂರ್ಣ ಪರಿಹಾರ ಕೊಟ್ಟಿಲ್ಲ. ಚುನಾವಣೆಗೆ ಹೋಗುವ ಮಹಾರಾಷ್ಟ್ರಕ್ಕೂ ಪರಿಹಾರ ಕೊಟ್ಟಿಲ್ಲ. ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯಗಳೂ ಸಮಾನ. ದೇಶದ 132 ಕೊಟಿ ಜನರೂ ಅವರಿಗೆ ಸಮಾನ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕಾರಣ ಮಾಡುತ್ತಿದ್ದಾರೆ. ಒಂದೂ ಸೀಟು ಗೆಲ್ಲದ ಕೇರಳ, ಒಂದೇ ಸೀಟು ಗೆದ್ದ ತಮಿಳುನಾಡಿಗೂ ಪರಿಹಾರ ಕೊಟ್ಟಿದ್ದಾರೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.
ಕರ್ನಾಟಕಕ್ಕೆ ಪರಿಹಾರ ಮೊತ್ತ ಬರಲಿದೆ. ಒಂದು ರಾಜ್ಯಕ್ಕೆ ಕೊಟ್ಟು ಇನ್ನೊಬ್ಬರಿಗೆ ಕೊಡದೇ ಇದ್ರೆ ರಾಜಕಾರಣ ಅನ್ನಬಹುದು. ಹಾಗೇನಾದರೂ ಆಗಿದ್ದರೆ ನಾವೇ ಧ್ವನಿ ಎತ್ತುತ್ತೇವೆ ಸಂಶಯ ಬೇಡ. ಅವಶ್ಯಕತೆ ಬಿದ್ದರೆ ನಮ್ಮ ಸಂಸದರು ಹಾಗೂ ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ. ಕರ್ನಾಟಕದ ಹಿತಾಸಕ್ತಿ ಬಿಟ್ಟು ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ಧ ಹರಿಹಾಯ್ದ ಕುರಿತು ಪ್ರತಿಕ್ರಿಯಿಸಿದ ಅವರು, ಸೂಲಿಬೆಲೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ಪೂರಕ ಕೆಲಸ ಮಾಡಿರುವುದನ್ನು ಮೊದಲು ಪ್ರಶಂಸೆ ಮಾಡಿದ್ದಾರೆ. ತಮ್ಮ ಅಪೇಕ್ಷೆಯನ್ನು ವ್ತಕ್ಯಪಡಿಸಿದ್ದಾರೆ ಅಷ್ಟೇ, ಅದು ಟೀಕೆ ಅಲ್ಲ. ಪ್ರಧಾನಿ ಕರ್ನಾಟಕ್ಕೆ ಬರಬೇಕು, ಪರಿಹಾರ ಘೋಷಿಸಬೇಕು ಎನ್ನುವುದು ಅವರ ಅಪೇಕ್ಷೆ. ಇದುವೇ ಬ್ಯೂಟಿ ಆಫ್ ಡೆಮಾಕ್ರಸಿ. ನಮಗೂ ಅವರಂತೆ ಸಮಾನ ಅಪೇಕ್ಷೆ ಇದೆ ಎಂದು ರವಿ ತಿಳಿಸಿದರು.