ಪಣಜಿ: ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಾಯಲ್ಲಿ ಬರುವ ಭ್ರಷ್ಟಾಚಾರ ಮಾತಿಗೂ ಏನೂ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್‍ರವರೇ ಸ್ವತಃ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬೇಲ್‍ನಲ್ಲಿರುವವರು. ಇಂತವರ ಬಾಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು. ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರ ಮಾತಿಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ಇದೆ. ತನ್ನಂತೆಯೇ ಎಲ್ಲರೂ ಭ್ರಷ್ಟರಿದ್ದಾರೆ ಅಂತಾ ಅವರು ಭಾವಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊಸ ವೈರಸ್ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!
ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್, ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಒಳ್ಳೆಯ ಸರ್ಕಾರ ಕೊಟ್ಟಿದೆ. ಇದು ಹಳೆ ಗೋವಾ ಅಲ್ಲಾ ಹೊಸ ಗೋವಾ, ಅಭಿವೃದ್ಧಿ ಆಗುತ್ತಿರುವ ರಾಜ್ಯವಾಗಿದೆ. ಗೋವಾದಲ್ಲಿ ಫ್ಲೈಓವರ್ ನೋಡಲು ಸಿಕ್ಕಿದ್ದು, ಅದು ಬಿಜೆಪಿ ಸರ್ಕಾರ ಕೊಟ್ಟಂತ ಸಾಧನೆಯಾಗಿದೆ. ಆ.15ರಂದು ಲೋಕಾರ್ಪಣೆಯಾಗುವ ಹೊಸ ಏರ್‍ಪೋರ್ಟ್ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಐಐಟಿ, ವೈದ್ಯಕೀಯ ಕಾಲೇಜು ಇವೆಲ್ಲ ಬಿಜೆಪಿ ಸರ್ಕಾರದ ಕೊಡುಗೆಗಳೇ ಎಂದರು. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ
ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಕೂಪವಿದ್ದಂತೆ. ಅವರ ವಂಶವಾದ ಬೆಳೆಸುವಂತಹ ಜನಸಾಮಾನ್ಯರಿಗೆ ಅವಕಾಶ ನೀಡದಂತ ಪಕ್ಷವಾಗಿದೆ. ಆದರೆ ನಮ್ಮ ಪಕ್ಷ ಸಾಮಾನ್ಯ ಜನರಲ್ಲಿ ರಾಜಕೀಯ ನಾಯಕತ್ವ ಬೆಳೆಸುತ್ತೆ. ಹೀಗಾಗಿ ಕಾಂಗ್ರೆಸ್‍ನಿಂದ ಗೋವಾ ಜನತೆ ಪಾಠ ಹೇಳಿಸಿಕೊಳ್ಳುವಂತ ಸ್ಥಿತಿಯಲ್ಲಿ ಇಲ್ಲ. ಶಿವಕುಮಾರ್ ಅವರು ಬರಲಿ, ಇನ್ನೂ ನೂರು ಜನ ಬರಲಿ ಗೋವಾದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬಂದ ದಾರಿಗೆ ಸುಂಕ ಇಲ್ಲ ಅಂತಾ ಅವರು ವಾಪಸ್ ಹೋಗಬೇಕು ಎಂದು ಗರಂ ಆದರು.