ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಖಾತೆ ಹಂಚಿಕೆ ಹಾಗೂ ಡಿಸಿಎಂ ಸ್ಥಾನಗಳು ಘೋಷಣೆಯಾಗುತ್ತಿದಂತೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಸಿಟಿ ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಸರ್ಕಾರಿ ಕಾರನ್ನು ಈಗಾಗಲೇ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ತಮಗೆ ನೀಡಿದ್ದ ಪ್ರವಾಸೋದ್ಯಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವಲ್ಲಿಯೂ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪಕ್ಷದಲ್ಲಿನ ಸದ್ಯದ ಕೆಲ ಬೆಳವಣಿಗೆ ಹಾಗೂ ಅಸಮಾಧಾನಿತರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
Advertisement
Advertisement
ಮೂಲಗಳ ಮಾಹಿತಿ ಅನ್ವಯ ನಾಳೆ ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವ ಸಿಟಿ ರವಿ ಅವರು ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಪಷ್ಟನೆ ಪಡೆಯಲು ಸಿಟಿ ರವಿ ಅವರಿಗೆ ದೂರವಾಣಿ ಸಂಪರ್ಕ ಮಾಡಿದಾಗ ನನಗೆ ಯಾವುದೇ ಅಸಮಾಧಾನ ಇಲ್ಲ. ಎಲ್ಲವನ್ನು ನೀವೇ ನಿರ್ಧಾರ ಮಾಡುತ್ತಿದ್ದೀರಾ. ನನ್ನ ಫೋನ್ ಬ್ಯಾಟರಿ ಡೆಡ್ ಆಗಿದ್ದರಿಂದ ಸ್ವಿಚ್ ಆಫ್ ಆಗಿತ್ತು. ಪಕ್ಷ ನಿಷ್ಠೆ ಬಗ್ಗೆ ನನಗೆ ಯಾರು ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ನೀವು ಮಂಗಳವಾರ ರಾಜೀನಾಮೆ ಕೊಡುವುದು ನಿಜವೇ ಎಂಬ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.