ಕಾಂಗ್ರೆಸ್‍ಗೆ ಕ್ಯಾನ್ಸರ್ ವ್ಯಾಪಿಸಿದೆ, ಚಿಕಿತ್ಸೆ ಇಲ್ಲ: ಸಿ.ಟಿ.ರವಿ ವ್ಯಂಗ್ಯ

Public TV
2 Min Read
CT Ravi

ಚಿಕ್ಕಮಗಳೂರು: ಕಾಂಗ್ರೆಸ್‍ಗೆ ಕ್ಯಾನ್ಸರ್ ವ್ಯಾಪಿಸಿದೆ. ಅದಕ್ಕೆ ಚಿಕಿತ್ಸೆ ಇಲ್ಲ, ಕ್ಯಾನ್ಸರ್ ವ್ಯಾಪಿಸಿದ ಮೇಲೆ ಇಡೀ ದೇಹವನ್ನ ತಿನ್ನುತ್ತೆ. ಎಲ್ಲಿವರೆಗೆ ಕಾಂಗ್ರೆಸ್ ಜಾತಿವಾದ, ಪರಿವಾರವಾದ, ಭ್ರಷ್ಟಾಚಾರದಲ್ಲೇ ಮುಳುಗಿರುತ್ತೋ ಅಲ್ಲಿವರೆಗೂ ಅದಕ್ಕೆ ಚಿಕಿತ್ಸೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ತಾಲೂಕಿನ ಕುರುವಂಗಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯುತ್ತಾರೆ. ನಾಳೆ ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೂ ಆಶ್ಚರ್ಯವಿಲ್ಲ. ಯಾಕೆಂದರೆ, ಸಿದ್ದರಾಮಯ್ಯನವರ ಆಪ್ತ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಡುತ್ತಿದ್ದಾರೆ. ಅವರು ಎಂತಹ ದೋಸ್ತ್ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಚಡ್ಡಿ ದೋಸ್ತ್, ಕ್ಲಾಸು-ಗ್ಲಾಸು ಎಂತೆಂತದ್ದೋ ಹೇಳ್ತಾರಲ್ಲ ಆ ರೀತಿಯ ಸ್ನೇಹಿತರು. ಈಗ ಅವರೇ ಪಕ್ಷ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ:  ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

CT Ravi 1

ಎಲ್ಲರನ್ನೂ ಮುಂದೆ ಕಳಿಸಿ ನಾಳೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಬಿಟ್ಟು ಬಂದರೂ ಬರಬಹುದು. ಕಾಂಗ್ರೆಸ್, ಕರ್ನಾಟಕ ಸೇರಿ ಅಲ್ಲಲ್ಲೇ ಗುಟುಕು ಜೀವ ಇಟ್ಟುಕೊಂಡಿದೆ. ಪಕ್ಷದ ಬೆಳವಣಿಗೆಗೆ ನೇತೃತ್ವ-ನೀತಿ ಕಾರಣವಾಗುತ್ತೆ. ನೀತಿಹೀನ ಪಕ್ಷದ ಮೇಲೆ ಜನ ಹೇಗೆ ವಿಶ್ವಾಸವಿಡುತ್ತಾರೆ.  ನಮ್ಮ ಮಲೆನಾಡಲ್ಲಿ ಒಂದು ಗಾದೆ ಹೇಳುತ್ತಾರೆ. ಹೊತ್ಕಂಡ್ ಹೋದ ನಾಯಿ ಶಿಕಾರಿ ಮಾಡುತ್ತಾ ಎಂದು ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ವಿರುದ್ಧವೂ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

ಆಸೆ-ಆಮಿಷ ತೋರಿಸಿ ಸದಸ್ಯತ್ವ ಮಾಡಿಸಿದರೆ ಪಕ್ಷದ ಕಮಿಟ್ಮೆಂಟ್ ಎಲ್ಲಿರುತ್ತೆ. ವಿಚಾರಧಾರೆ, ನಾಯಕತ್ವದ ಮೇಲೆ ನಂಬಿಕೆ ಇಟ್ಟು, ವಿಶ್ವಾಸದ ಮೇಲೆ ಸದಸ್ಯರಾಗುವವರು ಉಳಿಯುತ್ತಾರೆ. ಆಸೆ ತೋರಿಸಿ ಸದಸ್ಯರನ್ನಾಗಿಸಿದರೆ ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರು ಮಾವನ ಕಡೆ ಅಂತ ಹೋಗುತ್ತಾರೆ. ನಾಳೆ ಮತ್ಯಾರೋ ಮಿಕ್ಸಿ ಕೊಡ್ತೀವಿ ಎಂದರೆ ಆಕಡೆ ಹೋಗ್ತಾರೆ ಎಂದು ಕಾಂಗ್ರೆಸ್ ಪಕ್ಷವನ್ನ ಕುಟುಕಿದ್ದಾರೆ.

CTRavi

ಇನ್ನು ಇದೇ ವೇಳೆ ಮಾತನಾಡಿದ ಅವರು, 2023 ಮಾರ್ಚ್ ಬಳಿಕವೇ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಅವಧಿಗೂ ಮುನ್ನವೇ ಎಲೆಕ್ಷನ್ ಪಕ್ಷಕ್ಕೂ ಅಗತ್ಯವಿಲ್ಲ. ರಾಜ್ಯಕ್ಕೂ ಅಗತ್ಯವಿಲ್ಲ. ಜನರಿಗೆ ಕೊಟ್ಟಿರುವ ಆಶ್ವಾಸನೇ ಈಡೇರಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಿದ ಬಳಿಕವೇ ಚುನಾವಣೆ ನಡೆಯುತ್ತದೆ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲವೆಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೂ, ಈ ವಿಷಯದ ಸುದ್ದಿ ಆಗಾಗ ಏಕೆ ಹರಡುತ್ತೋ ಗೊತ್ತಿಲ್ಲ. ನಾನು ಕಾರ್ಯಕರ್ತ ಅಷ್ಟೆ, ಜಮ್ಮು-ಪಶ್ಚಿಮಬಂಗಾಳ-ಗುಜರಾತ್ ಎಲ್ಲಿಗೆ ಹಾಕುದ್ರು ಹೋಗ್ತೀನಿ, ಕಾರ್ಯಕರ್ತನಿಗೆ ಕಾರ್ಯ ಮಾಡುವುದಷ್ಟೆ ಕೆಲಸ, ಅದೇ ಜವಾಬ್ದಾರಿ-ಕರ್ತವ್ಯ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *