ಬೆಂಗಳೂರು: ಗುತ್ತಿಗೆದಾರರು ಬರೆದಿರೋ ಪ್ರೇಮ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಉತ್ತರ ಕೊಡಬೇಕು. ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿರೋದಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಗುತ್ತಿಗೆದಾರರ ಪ್ರೇಮ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ಏನು? ನಿಮ್ಮ ಸರ್ಕಾರದ ಬಗ್ಗೆ ಗುತ್ತಿಗೆದಾರರು ಪ್ರೇಮ ಪತ್ರ ಬರೆದಿದ್ದಾರೆ. ನಿಮ್ಮ ಸರ್ಕಾರದಲ್ಲಿ ಗುತ್ತಿಗೆದಾರರನ್ನ ಯಾವ ರೀತಿ ಕಾಡ್ತಿದ್ದಾರೆ ಅನ್ನೋದನ್ನ ಅವರ ಪ್ರೇಮ ಪತ್ರದಲ್ಲಿ ನಿವೇದನೆ ಮಾಡಿದ್ದಾರೆ. ನಿಮ್ಮ ಎರಡು ವರ್ಷದ ಅವಧಿಯಲ್ಲಿ ಕಮಿಷನ್ ಡಬಲ್ ಆಗಿದೆ ಅಂತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಈಗ ಹೇಳಿ ಪೇ ಸಿಎಂ ಅಂತ ಪೋಸ್ಟರನ್ನ ಯಾರ ಮುಖಕ್ಕೆ ಅಂಟಿಸಬೇಕು? ಯಾರ ಮನೆ ಬಾಗಿಲಿಗೆ ಅಂಟಿಸಬೇಕು? ನಿಮ್ಮ ಮುಖಕ್ಕೆ ಈಗ ಪೇ ಸಿಎಂ ಅಂತ ಅಂಟಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯ ಸಮೀಕ್ಷೆ ತಂತ್ರ- ಸಿಸಿ ಪಾಟೀಲ್
ಕಮಿಷನ್ ಆರೋಪ ನಿಮ್ಮ ಸರ್ಕಾರದ ಮೇಲೆ ಮಾಡಿದ್ದಾರೆ. ಕೇರಳ, ಆಂಧ್ರ, ತೆಲಂಗಾಣ ಸಿಎಂ ಮೇಲೆ ಗುತ್ತಿಗೆದಾರರು ಆರೋಪ ಮಾಡಿಲ್ಲ. ಕರ್ನಾಟಕ ಸರ್ಕಾರದ ಸಚಿವರ ಮೇಲೆ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಿಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಯಾರು ಹೊರಬೇಕು? ನೀವೇ ನೈತಿಕ ಹೊಣೆ ಹೊರಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ
ವಿಪಕ್ಷ ಇದ್ದಾಗ ಬೇರೆ ಅವರಿಗೆ ರಾಜೀನಾಮೆ ಕೊಡಬೇಕು ಅಂತ ನೀವು ಕೇಳಿದ್ರಿ. ಈಗ ನಿಮ್ಮ ರಾಜೀನಾಮೆ ಯಾವಾಗ ಕೊಡ್ತೀರಾ? ಇದರ ಹೊಣೆ ಸಿದ್ದರಾಮಯ್ಯ ಹೊರಬೇಕು. ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡು ಒತ್ತಡ, ತಂತ್ರ ಹೇರಿ ಅವರಿಗೆ ಅನಿವಾರ್ಯತೆ ಸೃಷ್ಟಿ ಮಾಡಿ ನಿಮಗೆ ಕೇಳಿದಷ್ಟು ಕಮಿಷನ್ ಕೊಟ್ಟು ಅನಿವಾರ್ಯವಾಗಿ ಒತ್ತಡಕ್ಕೆ ಬಲಿಯಾಗೋ ಹಾಗೇ ಮಾಡಿದ್ರಿ. ಈ ಪಾಪದ ಪ್ರಾಯಶ್ಚಿತ ಯಾರಿಗೆ? ನಿಮಗೆ ಪ್ರಾಯಶ್ಚಿತ ಆಗಬೇಕು. ನಾನು ಆಗ್ರಹ ಮಾಡ್ತೀನಿ ಗುತ್ತಿಗೆದಾರರ ಪ್ರೇಮ ಪತ್ರಕ್ಕೆ ರಾಜೀನಾಮೆ ಮೂಲಕ ಉತ್ತರ ಕೊಡಿ, ಮಾತಿನ ಉತ್ತರ ಬೇಡ ಎಂದು ಆಗ್ರಹಿಸಿದ್ದಾರೆ.
2 ವರ್ಷ ನಿಮ್ಮ ಮಾತಿನ ಉತ್ತರ ಕೇಳಿದ್ದೇವೆ. 2 ವರ್ಷದಲ್ಲಿ ಏನು ಸುಧಾರಣೆ ಮಾಡಿದ್ದೀರಿ ಅಂತಾನೂ ನೋಡಿದ್ದೇವೆ. ಕಮಿಷನ್ ಡಬಲ್ ಮಾಡೋದು ಸುಧಾರಣೆನಾ? ನಿಮ್ಮ ಪರಮಾಪ್ತರು ಅನ್ನೋರೇ ಇದರ ರೂವಾರಿಗಳಾಗಿದ್ದಾರೆ ಎಂದರೆ ನಿಮ್ಮ ಕೃಪಾಕಟಾಕ್ಷ ಇಲ್ಲದೇ ಅವರೆಲ್ಲ ಆ ಕೆಲಸ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ ಈ ಹೊಣೆ ನೀವೇ ಹೊತ್ತು, ರಾಜೀನಾಮೆ ಕೊಡಬೇಕು ಎಂದಿದ್ದಾರೆ.