– ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಜಯಭೇರಿ
ಚಿಕ್ಕಮಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಚಿಕ್ಕಮಗಳೂರು (Chikkamagaluru) ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ (DCC Bank Election) ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಹಾಗೂ ಎಸ್.ಎಲ್ ಭೋಜೇಗೌಡ ಗೆಲುವಿನ ನಗೆ ಬೀರಿದ್ದಾರೆ.
ಸಿ.ಟಿ ರವಿ (CT Ravi) 27, ಎಸ್.ಎಲ್ ಭೋಜೇಗೌಡ 30 ಮತಗಳನ್ನ ಗಳಿಸಿ ಗೆದ್ದು ಬೀಗಿದ್ರೆ, ಬಿಜೆಪಿಯ (BJP) ಮತ್ತೊಬ್ಬ ರೆಬೆಲ್ ಅಭ್ಯರ್ಥಿ ನಿರಂಜನ್ 5 ಮತಗಳನ್ನು ಪಡೆದಿದ್ದಾರೆ. 13 ನಿರ್ದೇಶಕರನ್ನ ಹೊಂದಿರೋ ಡಿಸಿಸಿ ಬ್ಯಾಂಕ್ 8 ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. ಇಂದು ಐವರಿಗಾಗಿ ಮತದಾನ ನಡೆದಿತ್ತು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದ್ದು, ಕಾಂಗ್ರೆಸ್ ಒಂದೇ ಒಂದು ಕ್ಷೇತ್ರ ಗೆಲ್ಲುವಲ್ಲಿ ವಿಫಲವಾಗಿದೆ. 13 ರ ಪೈಕಿ 11 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದರೆ, 2 ಸ್ಥಾನ ಜೆಡಿಎಸ್ ಪಾಲಾಗಿದೆ. ಐದು ವಿಧಾನಸಭಾ ಕ್ಷೇತ್ರ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಕಾಂಗ್ರೆಸ್ ಶಾಸಕರಿದ್ದಾರೆ. ಆದರೂ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರವನ್ನು ಗೆದ್ದಿಲ್ಲ.
ವ್ಯವಸಾಯೋತ್ಪನ್ನ ಸಹಕಾರ ಸಂಘಗಳಿಂದ ಕಡೂರಿನ ಹಾಲಿ ಶಾಸಕ ಕೆ.ಎಸ್ ಆನಂದ್ ಸ್ಪರ್ಧಿಸಿದ್ದರು. ಕೊಪ್ಪ ಬಿಜೆಪಿ ಮುಖಂಡ ದಿನೇಶ್ ಹೊಸೂರು ಎದುರು ಕೆ.ಎಸ್ ಆನಂದ್ ಸೋತಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಕೂಡ ಸೋಲು ಕಂಡಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರು, ಎಸ್.ಎಲ್ ಭೋಜೇಗೌಡ ಅವರನ್ನ ಹೊತ್ತು ಕುಣಿದರು. ಆದರೆ, ಸರ್ಕಾರ ಹಾಗೂ ಐದಕ್ಕೆ ಐದು ಕಾಂಗ್ರೆಸ್ ಶಾಸಕರಿದ್ದರು ಕೂಡ ಚಿಕ್ಕಮಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲದಿರುವುದು ಆಡಳಿತ ಪಕ್ಷಕ್ಕೆ ಮುಖಭಂಗ ಮಾಡಿದಂತಾಗಿದೆ.




