CSR ಅಂದರೆ ಕರಪ್ಟ್ ಸನ್ ಆಫ್ ಸಿದ್ದರಾಮಯ್ಯ: HDK ವಾಗ್ದಾಳಿ

Public TV
4 Min Read
Yathindra Siddaramaiah HD Kumaraswamy

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿದ್ದಾರೆ. ಯತೀಂದ್ರಗೆ (Yathindra Siddaramaiah) ನೀಡಿದ ಅಧಿಕಾರ ಪ್ರಶ್ನಿಸಿರುವ ಅವರು, ಕುಮಾರಸ್ವಾಮಿ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತಾಡಿದ್ದ ಸಿಎಂಗೆ ಅಧಿಕಾರದ ಅಂಟುರೋಗ ಎಂದು ಟೀಕಿಸಿದ್ದಾರೆ.

ಸಿಎಂ ಕಚೇರಿಯಲ್ಲಿ ಯಾವ ಅಧಿಕಾರಿಗೆ ಯಾವ ಜವಾಬ್ದಾರಿ ಎಂಬ ಪಟ್ಟಿ ರಿಲೀಸ್ ಮಾಡಿರುವ ಕುಮಾರಸ್ವಾಮಿ, ವರುಣಾ ಕ್ಷೇತ್ರದ ಜವಾಬ್ದಾರಿ ವಿಜಯ್ ಅನ್ನೋರಿಗೆ ಒಪ್ಪಿಸಿದ್ದಾರೆ. ಆದರೆ ಮಹದೇವ್ ಹಸ್ತಕ್ಷೇಪಕ್ಕೆ ದಾಖಲೆ ಸಮೇತ ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿ ಪ್ರಶ್ನೆ ಮಾಡಿದ್ದಾರೆ.

ಟ್ವೀಟ್‌ನಲ್ಲೇನಿದೆ?
ಸನ್ಮಾನ್ಯ ಮುಖ್ಯಮಂತ್ರಿಗಳೇ, ವೀಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ. ಒಂದು ವೀಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಕೆಲಸ ಬಿಟ್ಟು ನಿಮಗೆ ಸುವ್ವಿಸುವ್ವಾಲೆ ಹಾಡುತ್ತಿದೆ. ಅವರು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ? ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾರೆಂದು ಭಾವಿಸಿದರೆ ಅದು ನಿಮ್ಮ ಪೆದ್ದುತನವಷ್ಟೇ.

ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ ಹೊರಗುತ್ತಿಗೆ (Out Source) ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ.

HD KUMARASWAMY SIDDARAMAIAH

ಅಷ್ಟೇ ಅಲ್ಲ, ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಸಲು ಹಾಗೂ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ. ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆಡಿಪಿ ಪಟ್ಟ ಕಟ್ಟಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ. ನನಗೆ ತಿಳಿದಂತೆ ಸಿಎಸ್‌ಆರ್ ಎಂದರೆ, ಕಾರ್ಫೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ. ಈಗ ಅದು ಕರಪ್ಟ್ ಸನ್ ಆಫ್ ಸಿದ್ದರಾಮಯ್ಯ ಆಗಿದೆ. ರಾಜ್ಯದಲ್ಲಿ ಸಿಎಸ್‌ಆರ್ ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಾ ಹೇಗೆ? 224 ಕ್ಷೇತ್ರಗಳ ಸಿಎಸ್‌ಆರ್ ಉಸ್ತುವಾರಿ ಅವರದ್ದೇನಾ? 2% ಸಿಎಸ್‌ಆರ್ ಮೇಲೂ ನಿಮ್ಮ ಕಾಕದೃಷ್ಟಿ ಬಿದ್ದಂತಿದೆ.

ನಿಮ್ಮ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ ವಿಶೇಷ ಕರ್ತವ್ಯಾಧಿಕಾರಿ ಆರ್ ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಕೆಎನ್ ವಿಜಯ್ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ?

HD Kumaraswamy

ಯತೀಂದ್ರರು ಶಿಕ್ಷಣದ ಕುರಿತು ಎಂ ರಾಮಯ್ಯ ಜತೆ, ವರುಣಾ ಬಗ್ಗೆ ಕೆಎನ್ ವಿಜಯ್ ಜತೆ ಚರ್ಚಿಸದೆ, ಇವೆರಡಕ್ಕೂ ಸಂಬಂಧವಿಲ್ಲದವೇ ಸಿಆಸು ಸಚಿವರ ಆಪ್ತಶಾಖೆ, ವರ್ಗಾವಣೆ-ಸೇವಾ ಹೊಣೆಯ ಮಹದೇವು ಜತೆ ಫೋನ್ ಚರ್ಚೆ ನಡೆಸಿದ್ದೇಕೆ? ಸಿಎಸ್‌ಆರ್‌ಗೂ ಅವರಿಗೂ ಸಂಬಂಧವೇನು? ಸಿಎಸ್‌ಆರ್ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

ಜನಹಿತಕ್ಕಾಗಿ ದನಿಯೆತ್ತಿದ ನನ್ನನ್ನು ತಂದೆ, ಅಣ್ಣ, ಮಗನನ್ನು ಎಳೆತಂದು ಕಟ್ಟಿ ಹಾಕಲು ಸಾಧ್ಯವಿಲ್ಲ ಸಿದ್ದರಾಮಯ್ಯನವರೇ? ಕಷ್ಟದಲ್ಲಿರುವ ಜನ ಎಲ್ಲಿದ್ದೀಯಪ್ಪ ಕುಮಾರಣ್ಣ? ಎಂದರೆ ಓಡಿ ಹೋಗುತ್ತೇನೆ. ಸತ್ಯಕ್ಕೆ ಸಮಾಧಿ ಕಟ್ಟಲು ನೀವು ಸೃಷ್ಟಿಸುತ್ತಿರುವ ಸುಳ್ಳಿನಸೌಧದ ಅಡಿಪಾಯವೇ ಈಗ ಕುಸಿಯುತ್ತಿದೆ. ಮಾಡದ ತಪ್ಪಿಗೆ ವಿದ್ಯುತ್ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ, ರಾಜ್ಯದ ಮುಖ್ಯಮಂತ್ರಿಯನ್ನೇ ಟೆಲಿಫೋನ್ ಆಪರೇಟರ್ ಮಾಡಿದ ನಿಮ್ಮ ಪುತ್ರನನ್ನು ಇನ್ನೂ ಸಮರ್ಥನೆ ಮಾಡುತ್ತಿದ್ದೀರಲ್ಲಾ? ಛೀ..! (ವಿ.ಸೂ: ಟೆಲಿಫೋನ್ ಆಪರೇಟರ್‌ಗಳ ಬಗ್ಗೆ ನನಗೆ ಗೌರವವಿದೆ).

ನಿಮ್ಮ, ನಿಮ್ಮ ಪುತ್ರನಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡನ್ನು ಕುಖ್ಯಾತಗೊಳಿಸಿದ್ದೀರಿ. ಹೋದ ಮಾನ ವಾಪಸ್ ಪಡೆಯಲಿಕ್ಕೇನು ಮಾಡುತ್ತೀರಿ? ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಾ? ಅಷ್ಟು ನೈತಿಕ ಧೈರ್ಯ ನಿಮಗೆ ಉಂಟೇ? ಪೆನ್‌ಡ್ರೈವ್ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ? ಸಿಎಂ ಸಾಹೇಬರೇ, ಸಿಂಹ ಸಿಂಗಲ್ಲಾಗಿ ಬೇಟೆಯಾಡುತ್ತದೆ, —— ಗುಂಪಾಗಿ ಬರುತ್ತವೆ. ಬಿಟ್ಟಸ್ಥಳ ಭರ್ತಿ ಮಾಡಿಸುವ ಕೆಲಸ ನನ್ನಿಂದ ನೀವು ಮಾಡಿಸುವುದಿಲ್ಲ ಎಂದು ನಂಬಿದ್ದೇನೆ.

ನನ್ನ ಮಾನಸಿಕ ಸ್ವಾಸ್ಥ್ಯ ಇರಲಿ. ನಿಮ್ಮ ಅಧಿಕಾರದ ಅಂಟುರೋಗಕ್ಕೆ ಮದ್ದೇನು? ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ? ಮಾನಸಿಕ ಅಸ್ವಾಸ್ಥ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು? ತುರ್ತುಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಮತ್ತೊಂದು ದೂರು- ಬೇಲ್ ಮೇಲಿರೋ ಶ್ರೀಗಳ ಮಠ ವಾಸ್ತವ್ಯಕ್ಕೆ ವಿರೋಧ

Share This Article