ಚಿತ್ರದುರ್ಗ: ಶೈಕ್ಷಣಿಕ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಹುಳಿಯಾರು ರಸ್ತೆಯಲ್ಲಿ ನಡೆದಿದೆ.
ಬುಧವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಗಾಯಗೊಂಡವರು ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದಗಣಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಕ್ರೂಸರ್ ವಾಹನದಲ್ಲಿದ್ದ ಮೂರು ಮಂದಿ ಶಿಕ್ಷಕರು, ಡ್ರೈವರ್, ಅಡುಗೆ ಕೆಲಸದವನು ಸೇರಿದಂತೆ ಒಟ್ಟು 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಹಿರಿಯೂರು ತಾಲೂಕು ಆಸ್ಪತ್ರೆ, ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ಹಾಗೂ ದಾವಣಗೆರೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಡ್ರೈವರ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಶ್ರೀನಿವಾಸ್ ಎಂಬ ಮತ್ತೊಬ್ಬ ವ್ಯಕ್ತಿ ವಾಹನ ಚಲಾಯಿಸುತ್ತಿದ್ದರು ಎಂದು ಶಿಕ್ಷಕ ಲಿಂಗಪ್ಪ ಪೂಜಾರ್ ತಿಳಿಸಿದ್ದಾರೆ.
ಅಪಘಾತವಾದ ನಂತರ ನಮಗೆ ಎಚ್ಚರವಾಯಿತು, ಅಪಘಾತ ಯಾಕೆ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಲಿಂಗಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದಾರೆ.