ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

Public TV
2 Min Read
CRPF Yodha Guru

– ಸೇನಾ ವಾಹನದ ಜೊತೆ ಮೆರವಣಿಗೆಯಲ್ಲಿ ಸಾಗಿದ ಜನತೆ
– ಎರಡು ಬದಿಯಲ್ಲಿ ನಿಂತು ಹುತಾತ್ಮ ಗುರುವಿಗೆ ನಮನ

ಬೆಂಗಳೂರು: ಅಮರ್ ರಹೇ, ಗುರು ಅಮರ್ ರಹೇ, ಹುತಾತ್ಮ ಯೋಧ ಗುರುವಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ… ಇದು ಹುತಾತ್ಮ ಗುರು ಅವರ ಮೃತ ಶರೀರರವನ್ನು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೇಳಿ ಬಂದ ಧ್ವನಿ.

ಎಚ್‍ಎಎಲ್‍ನಿಂದ ಸೇನಾ ವಾಹನದ ಮೂಲಕ ರಸ್ತೆ ಮಾರ್ಗವಾಗಿ ಗುರು ಅವರ ಮೃತ ದೇಹವನ್ನು ಹುಟ್ಟೂರು ಮದ್ದೂರು ತಾಲೂಕಿನ ಗುಡುಗೆರಿಯನ್ನು ತಲುಪಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಜನ ರಸ್ತೆ ಇಕ್ಕೆಲಗಳಲ್ಲಿ ನಿಂತು ಕಾಯ ತೊಡಗಿದರು. ಸೇನಾ ವಾಹನ ರಸ್ತೆಯಲ್ಲಿ ಸಾಗುತ್ತಿದ್ದಂತೆ ಗುರು ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿ ಜನ ಗೌರವ ಸಲ್ಲಿಸಿದರು. ಇನ್ನು ಕೆಲವರು ಸೇನಾ ವಾಹನ ನಿಲ್ಲಿಸಿ ಹೂವಿನ ಹಾರವನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.

CRPF Yodha Guru 2

ಗುರು ಮೃತದೇಹವಿದ್ದ ಸೇನಾ ವಿಮಾನ ದೆಹಲಿಯಿಂದ ಹೊರಟು ಎಚ್‍ಎಎಲ್ ವಿಮಾನ ನಿಲ್ದಾಣವನ್ನು 11.45ಕ್ಕೆ ತಲುಪಿತು. ಈ ವೇಳೆ ಸಿಎಂ ಕುಮಾಸ್ವಾಮಿ ಅವರು, ಗುರು ಅವರಿಗೆ ಹೂಗುಚ್ಚವನ್ನಿಟ್ಟು ಅಂತಿಮ ನಮನ ಸಲ್ಲಿಸಿ, ಹುತಾತ್ಮ ಗುರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನವನ್ನು ಫೋಷಿಸಿದರು. ಬಳಿಕ ಕೇಂದ್ರ ಸಚಿವ ಸದಾನಂದಗೌಡ, ಗೃಹ ಸಚಿವ ಎಂ.ಬಿ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

CRPF Yodha Guru 1

ಗುರು ಪಾರ್ಥಿವ ಶರೀರವನ್ನು ಸಾಗಿಸಲು ರಾಜ್ಯ ಸರ್ಕಾರವು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಶವ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗಿಸಲು ನಿರ್ಧರಿಸಲಾಗಿತ್ತು.

ಬೆಂಗಳೂರು ನಗರ ದಾಟುವವರೆಗೂ ರಸ್ತೆಯ ಎರಡೂ ಬದಿಯಲ್ಲಿ ಜನರು ನಿಂತು ಹುತಾತ್ಮ ಯೋಧ ಗುರು ಅವರ ಹೆಸರನ್ನು ಹೇಳಿ ಜೈ ಕಾರ ಹಾಕಿದರು. ಕೆಲವರು ವಾಹನವನ್ನು ಹತ್ತಿ ಗುರು ಅವರ ಅಂತಿಮ ದರ್ಶನ ಪಡೆದರು. ಭಾರತ್ ಮಾತಾಕೀ ಜೈ, ವೀರ್ ಯೋಧ ಗುರು ಅವರಿಗೆ ಜೈ ಎನ್ನುವ ಘೋಷಣೆ ರಸ್ತೆಯ ಉದ್ದಗಲಕ್ಕೂ ಕೇಳಿ ಬರುತ್ತಿತ್ತು. ಗುರು ಅವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಸೇನಾ ವಾಹನದ ಹಿಂದೆ ಕೆಲವರು ಬೈಕ್‍ನಲ್ಲಿ ಸಾಗಿದರು.

ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ತಾಲೂಕಿನ ಶಿವಪುರದ ಜನರು ಸೇನಾ ವಾಹನ ಬರುವಿಕೆಗಾಗಿ ಸುಮಾರು ಹೊತ್ತು ಕಾದು ನಿಂತಿದ್ದರು. ವಾಹನ ಬರುತ್ತಿದ್ದಂತೆ ಜಯ ಘೋಷ ಕೂಗಿ, ಸ್ವಲ್ಪ ಹೊತ್ತು ನಿಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

https://www.youtube.com/watch?v=8VMxyfP3zjM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *