ಶ್ರೀನಗರ: ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಯನ್ನು ಸಿಆರ್‌ಪಿಎಫ್ ಯೋಧರೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಯೋಧ ಸುರೇಂದ್ರ ಕುಮಾರ್ ಅವರ ಸಮಯ ಪ್ರಜ್ಞೆ ಹಾಗೂ ಮುಂಜಾಗ್ರತೆಯಿಂದಾಗಿ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಂದ್ರ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆಗಿದ್ದೇನು?:
ಜಮ್ಮು-ಕಾಶ್ಮೀರದಲ್ಲಿ ಗುರುವಾರ ಲೋಕಸಭಾ ಚುನಾವಣೆ ನಡೆದಿತ್ತು. ಈ ವೇಳೆ ಕಾಶ್ಮೀರದ 13ನೇ ಮತಗಟ್ಟೆಯ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಅದೇ ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಸುರೇಂದ್ರ ಕುಮಾರ್ ಅವರು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಮುಂದಾದರು. ವೈದ್ಯ ಸುನೀಮ್ ಅವರು ಫೋನ್ ಮಾಡಿ, ಸುರೇಂದ್ರ ಕುಮಾರ್ ಅವರಿಗೆ ಏನು ಮಾಡಬೇಕು ಎಂದು ಸಲಹೆ ನೀಡಿದರು.
ಸುರೇಂದ್ರ ಕುಮಾರ್ ಅವರು ವೈದ್ಯರು ಸಲಹೆಯಂತೆ 30 ಬಾರಿ ಅಸನ್ ಉಲ್ ಹಕ್ ಅವರ ಬಾಯಲ್ಲಿ ಬಾಯಿ ಇಟ್ಟು ಗಾಳಿ ಬಿಡುತ್ತಿದ್ದರು. ಈ ಮೂಲಕ ಸುಮಾರು 50 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿದರು. ಆಂಬುಲೆನ್ಸ್ ಮೂಲಕ ಮತಗಟ್ಟೆ ತಲುಪಿದ ವೈದ್ಯರು ಚಿಕಿತ್ಸೆ ಮುಂದುವರಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯ ಸುನೀಮ್ ಅವರು, ಸುರೇಂದ್ರ ಕುಮಾರ್ ಸಮಯ ಪ್ರಜ್ಞೆ ತೋರಿ, ನಾವು ಮತಗಟ್ಟೆ ತಲುಪುವವರೆಗೂ ಪ್ರಥಮ ಚಿಕಿತ್ಸೆ ನೀಡಿದರು. ಹೀಗಾಗಿ ಅಸನ್ ಉಲ್ ಹಕ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.