LatestMain PostNational

ಪುಲ್ವಾಮಾ ದಾಳಿಯಲ್ಲಿ ಮಡಿದ ಸಹದ್ಯೋಗಿ ತಂಗಿ ಮದುವೆ ನಡೆಸಿಕೊಟ್ಟ ಸಿಆರ್‌ಪಿಎಫ್‌ ಯೋಧರು!

Advertisements

ಲಕ್ನೋ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಹದ್ಯೋಗಿಯೊಬ್ಬರ ಸಹೋದರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಆರ್‌ಪಿಎಫ್‌ ಯೋಧರು ತಾವೇ ಮುಂದೆ ನಿಂತು ಮದುವೆ ನಡೆಸಿಕೊಟ್ಟಿದ್ದಾರೆ.

ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿ ಜ್ಯೋತಿ ಅವರ ಮದುವೆಯನ್ನು ಸಿಆರ್‌ಪಿಎಫ್‌ ಯೋಧರ ತಂಡ ನಡೆಸಿಕೊಟ್ಟಿದೆ. ಇಂತಹ ಅವಿಸ್ಮರಣೀಯ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನ

ಯೋಧನ ಮನೆಗೆ ಆಗಮಿಸಿದ ಸಿಆರ್‌ಪಿಎಫ್‌ ಸಿಬ್ಬಂದಿ, ಸಹೋದರರು ಮದುವೆಯಲ್ಲಿ ನಡೆಸಿಕೊಡಬೇಕಾದ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿಕೊಂಡರು. ವಧುವನ್ನು ಮಂಟಪಕ್ಕೆ ಕರೆತರುವ ಸಂಪ್ರದಾಯ ಅಣ್ಣನದ್ದಾಗಿರುತ್ತದೆ. ಆ ಕಾರ್ಯಕ್ರಮವನ್ನು ಸಹ ಸಿಬ್ಬಂದಿ ಮುಂದೆ ನಿಂತು ನಡೆಸಿಕೊಟ್ಟರು.

ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಿಆರ್‌ಪಿಎಫ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇದಕ್ಕೆ, ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್‌ ಯೋಧರು ಪಾಲ್ಗೊಂಡಿದ್ದರು ಎಂದು ಶೀರ್ಷಿಕೆ ನೀಡಲಾಗಿದೆ. ವಧುವಿಗೆ ಉಡುಗೊರೆ ನೀಡಿ ಸಿಆರ್‌ಪಿಎಫ್‌ ಯೋಧರು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಯಾವುದೇ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋದ

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಹುತಾತ್ಮರಾಗಿದ್ದರು.

ನನ್ನ ಮಗ ಈಗ ಈ ಜಗತ್ತಿನಲ್ಲಿಲ್ಲ. ಆದರೆ ಸಿಆರ್‌ಪಿಎಫ್‌ ಯೋಧರ ರೂಪದಲ್ಲಿ ಅನೇಕ ಮಕ್ಕಳನ್ನು ನಾವು ಹೊಂದಿದ್ದೇವೆ. ಕಷ್ಟ, ಸುಖದ ಸಂದರ್ಭದಲ್ಲಿ ಅವರು ನಮ್ಮೊಟ್ಟಿಗಿರುತ್ತಾರೆ ಎಂದು ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ತಂದೆ ಭಾವುಕವಾಗಿ ನುಡಿದಿದ್ದಾರೆ.

Leave a Reply

Your email address will not be published.

Back to top button