ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ

Public TV
1 Min Read
Pahalgam Terror Attack 2 1

– ಭಯೋತ್ಪಾದಕ ದಾಳಿಗೆ 6 ದಿನ ಮುಂಚಿತವಾಗಿ ಪಹಲ್ಗಾಮ್‌ಗೆ ವರ್ಗವಣೆಯಾಗಿದ್ದ ಸಿಬ್ಬಂದಿ
– 2 ವಾರಗಳಲ್ಲಿ 15 ಪಾಕ್‌ ಸ್ಪೈಗಳು ಅರೆಸ್ಟ್‌

ನವದೆಹಲಿ: ಪಾಕಿಸ್ತಾನ ಗುಪ್ತಚರ ಅಧಿಕಾರಿಗಳೊಂದಿಗೆ (PIO) ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇಂದ್ರ ಮೀಸಲು ಪಡೆ (CRPF) ಸಿಬ್ಬಂದಿಯೊಬ್ಬರನ್ನು ಬಂಧಿಸಿದೆ.

ಬಂಧಿಸಲ್ಪಟ್ಟ ಸಿಆರ್‌ಪಿಎಫ್‌ ಸಿಬ್ಬಂದಿಯನ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಪಹಲ್ಗಾಮ್‌ನಲ್ಲಿ 26 ಮಂದಿಯ ನರಮೇಧ ನಡೆಯುವುದಕ್ಕೆ 6 ದಿನಗಳ ಮುಂಚೆ ಅವರನ್ನ ಅಲ್ಲಿಗೆ ವರ್ಗಾತಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಬಂಧಿತ ಆರೋಪಿಯನ್ನ ಮೋತಿ ರಾಮ್‌ ಜಾಟ್‌ ಎಂದು ಗುರುತಿಸಲಾಗಿದೆ.

Pahalgam Terrorists 1

ಈತ 2023 ರಿಂದ ಪಾಕಿಸ್ತಾನ ಗುಪ್ತಚರ ಅಧಿಕಾರಿಗಳೊಂದಿಗೆ (ಪಿಐಒ) ಬೇಹುಗಾರಿಕೆ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ. ಅದಕ್ಕಾಗಿ ಪಾಕಿಸ್ತಾನಿ ಅಧಿಕಾರಿಗಳಿಂದ ಬಹು ಮಾರ್ಗಗಳ ಮೂಲಕ ಹಣ ಪಡೆಯುತ್ತಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ 116ನೇ ಬೆಟಾಲಿಯನ್‌ನಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದ ಮೋತಿ ರಾಮ್ ಜಾಟ್‌ರನ್ನ ಕಳೆದ ಏಪ್ರಿಲ್ 22 ರಂದು ಹಿಂದೂಗಳ ನರಮೇಧ ನಡೆಯುವುದಕ್ಕೆ 6 ದಿನಗಳ ಹಿಂದೆ ಪಹಲ್ಗಾಮ್‌ಗೆ ವರ್ಗಾವಣೆ ಮಾಡಲಾಗಿತ್ತು.

Pahalgam terror attack

ದೆಹಲಿಯಲ್ಲಿ ಮೋತಿ ರಾಮ್ ಅವರನ್ನು ಎನ್‌ಐಎ ಬಂಧಿಸಿದ್ದು, ಪಟಿಯಾಲ ಹೌಸ್ ವಿಶೇಷ ನ್ಯಾಯಾಲಯವು ಮೋತಿ ರಾಮ್ ಅವರನ್ನ ಜೂನ್ 6ರ ವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ ಆದೇಶಿಸಿದೆ.

ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಯ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ ಬೇಹುಗಾರಿಕೆ ಚಟುವಟಿಕೆಗಳ ವಿರುದ್ಧ ಸಮರ ಸಾರಿದೆ. ಇದರ ಪರಿಣಾಮ ಕಳೆದ 2 ವಾರಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ 15ಕ್ಕೂ ಹೆಚ್ಚು ಬೇಹುಗಾರರನ್ನ ಬಂಧಿಸಲಾಗಿದೆ.

Share This Article