ನವದೆಹಲಿ: ಜಮ್ಮು-ಕಾಶ್ಮೀರದ ಬಂಡಿಪೋರ್ ಎನ್‍ಕೌಂಟರ್ ವೇಳೆ ಒಂಭತ್ತು ಗುಂಡುಗಳು ತಾಗಿ ಕೋಮಾ ಸ್ಥಿತಿಗೆ ಜಾರಿದ್ದ ಸಿಆರ್‍ಪಿಎಫ್ ಕಮಾಂಡರ್ ಚೇತನ್ ಕುಮಾರ್ ಚೀತಾ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಬಂಡಿಪೋರಾನಲ್ಲಿ ಉಗ್ರದ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ 45 ವರ್ಷದ ಚೇತನ್ ಎದೆಗೆ 9 ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ ದಿನದಂದು ಚೇತನ್ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದರು. ಸುಮಾರು 2 ತಿಂಗಳ ಬಳಿಕ ಅವರು ಕೋಮಾದಿಂದ ಹೊರಬಂದಿದ್ದರು.
Advertisement
Advertisement
ದೆಹಲಿಯ ಏಮ್ಸ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಅವರನ್ನು ಕಳೆದ ವರ್ಷ ಏಪ್ರಿಲ್ 5 ರಂದು ಡಿಸ್ಚಾರ್ಜ್ ಮಾಡಲಾಗಿತ್ತು.
Advertisement
ಸುದೀರ್ಘ ಚಿಕಿತ್ಸೆ ಬಳಿಕ ಇದೀಗ ಆರೋಗ್ಯ ಸುಧಾರಿಸಿಕೊಂಡಿದ್ದ ಚೇತನ್ ಕುಮಾರ್ ಅವರು ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ. ಚೇತನ್ ಕುಮಾರ್ ಅವರ ಪತ್ನಿ ಮಾತನಾಡಿದ್ದು, ನನ್ನ ಗಂಡ ಮರಳಿ ಕೆಲಸಕ್ಕೆ ಹಾಜರಾಗುತ್ತಿರುವುದು ತುಂಬಾ ಖುಷಿ ನೀಡಿದೆ ಎಂದಿದ್ದಾರೆ.
Advertisement
ಚೇತನ್ 45ನೇ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. 2017ರ ಫೆಬ್ರವರಿ 14ರಂದು ಅವರಿಗೆ 9 ಗುಂಡೇಟು ತಗುಲಿತ್ತು. ಮೆದುಳು, ಹೊಟ್ಟೆ, ಕೈ, ಬಲಗಣ್ಣು ಹಾಗೂ ತೊಡೆಯಲ್ಲಿ ಗುಂಡು ಹೊಕ್ಕಿತ್ತು. ಸುಮಾರು ಒಂದೂವರೆ ತಿಂಗಳು ಚೇತನ್ ಕುಮಾರ್ ಕೋಮಾದಲ್ಲಿದ್ದರು. ಏಪ್ರಿಲ್ ನಲ್ಲಿ ಅವರಿಗೆ ಪ್ರಜ್ಞೆ ಮರಳಿತ್ತು. ಚೇತನ್ ಪೂರ್ತಿಯಾಗಿ ಚೇತರಿಸಿಕೊಳ್ಳಲು 2 ವರ್ಷಗಳು ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರು ಕಚೇರಿ ಕೆಲಸ ನೋಡಿಕೊಳ್ಳಲಿದ್ದಾರೆ. ಸಂಪೂರ್ಣ ಗುಣಮುಖರಾದ ಮೇಲೆ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಸ್ವತಂತ್ರ್ಯಾ ದಿನಚಾರಣೆ ದಿನದಂದು ಚೇತನ್ ಕುಮಾರ್ ಚೇತಾ ಅವರಿಗೆ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿತ್ತು.
ಉಗ್ರರಿಂದ ಗುಂಡೇಟು ತಿಂದು ಶ್ರೀನಗರದಿಂದ ದೆಹಲಿಗೆ ಬಂದಾಗ ಚೇತನ್ ಕುಮಾರ್ ಆರೋಗ್ಯ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಕೇಂದ್ರ ಗೃಹ ಖಾತೆ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಏಮ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟು ಚೇತನ್ ಕುಮಾರ್ ಅವರ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಏಮ್ಸ್ ನಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕೋಬ್ರಾ ಬೆಟಾಲಿಯನ್ ಸೇರುವ ಇಂಗಿತವನ್ನು ಚೇತನ್ ವ್ಯಕ್ತಪಡಿಸಿದ್ದರು. ಇದು ಇತರ ಯೋಧರಿಗೆ ನೈತಿಕ ಧೈರ್ಯ ತುಂಬಿದೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದರು.