ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ನನ್ನು ನೋಡಲು ಅವರ ಮನೆ ಮುಂದೆ ನಿನ್ನೆ ಅಭಿಮಾನಿಗಳ (Fans) ಜಮಾಯಿಸಿದ್ದರು. ಈದ್ ಹಬ್ಬದ ಪ್ರಯುಕ್ತವಾಗಿ ಸೇರಿದ್ದ ಅಭಿಮಾನಿಗಳು ತುಂಬಾ ಹೊತ್ತು ನೆಚ್ಚಿನ ನಟನಿಗಾಗಿ ಕಾದರು. ಮನೆ ಮುಂದೆ ಜನಸಾಗರವೇ ಹರಿದು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಶಾರುಖ್ ಮನೆ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಕೊನೆಗೂ ಶಾರುಖ್ ಮನೆಯ ಟೆರಸ್ ಏರಿ ಬಂದು ಅಭಿಮಾನಿಗಳತ್ತ ಕೈ ಬೀಸಿದರು. ಎಲ್ಲರಿಗೂ ಈದ್ ಶುಭಾಶಯ ಹೇಳಿದರು.
ಐದತ್ತು ನಿಮಿಷ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಲೇ ಇದ್ದರು. ನಮಸ್ಕಾರ ಮಾಡಿದರೆ, ಕೃತಜ್ಞತೆ ಹೇಳಿದರು. ಜೊತೆಗೆ ತಮ್ಮ ಕಿರಿ ಮಗನನ್ನು ಅವರು ಕರೆದುಕೊಂಡು ಬಂದಿದ್ದರಿಂದ, ಅವನಿಗೂ ಅಭಿಮಾನಿಗಳಿಗೆ ವಿಶ್ ಮಾಡಲು ಹೇಳಿದರು. ನಂತರ ಮನೆಯೊಳಗೆ ತೆರಳಿದರು. ಶಾರುಖ್ ಹೋದರೂ, ಅಭಿಮಾನಿಗಳು ಹೋಗಲಿಲ್ಲ. ಹಾಗಾಗಿ ಲಾಠಿ ರುಚಿ ತೋರಿಸಿ, ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಬೇಕಾಯಿತು.