ಯಾದಗಿರಿ/ಹಾವೇರಿ: ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಯಾದಗಿರಿಯಲ್ಲಿ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ಮಣ್ಣುಪಾಲಾಗಿದೆ. ಜಿಲ್ಲೆಯ ಅಬ್ಬೆತುಮಕೂರ, ಹೆಡಗಿಮುದ್ರಾ, ಠಾಣಾಗುಂದಿ, ನಾಯ್ಕಲ್, ಮನಗನಾಳ, ಅನಕಸೂಗುರ, ಐಕೂರ ಮೊದಲಾದ ಕಡೆ ಭತ್ತದ ಬೆಳೆ ಹಾಗೂ ಸಜ್ಜೆ ಬೆಳೆ ನೆಲ ಕಚ್ಚಿದೆ.
Advertisement
Advertisement
ಏಪ್ರಿಲ್ 7ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ ಕೂಡ ಬೆಳೆ ಹಾನಿಯಾಗಿತ್ತು. ಈಗ ಮತ್ತೆ ಶನಿವಾರ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ಹಾನಿಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸದ್ಯಕ್ಕೆ 3 ಸಾವಿರಕ್ಕೂ ಹೆಚ್ಚು ಎಕ್ರೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
Advertisement
ಇತ್ತ ಹಾವೇರಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ ಸಮೇತ ಮಳೆಗೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರೋ ರೈತರೊಬ್ಬರ ಮಾವಿನ ತೋಟದಲ್ಲಿ ಎರಡು ಮಾವಿನ ಗಿಡಗಳು ಧರೆಗೆ ಉರುಳಿದ್ದು, ಅಪಾರ ಪ್ರಮಾಣದ ಮಾವಿನ ಕಾಯಿಗಳು ಮಣ್ಣುಪಾಲಾಗಿದೆ.
Advertisement
ರೈತ ಕನ್ನಪ್ಪ ಕಟಗಿ ಅವರು ಮೂರು ಎಕ್ರೆ ಜಮೀನಿನಲ್ಲಿ ಮಾವು ಬೆಳೆಸಿದ್ದರು. ಮಾವಿನ ಗಿಡಗಳಲ್ಲಿ ಉತ್ತಮ ಫಸಲು ಬಂದಿತ್ತು. ಆದರೆ ಶನಿವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಗಿಡಗಳು ಹಾಗೂ ಮಾವಿನ ಕಾಯಿ ಉದುರಿಬಿದ್ದು, ಐದು ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಇದು ಅತಿವೃಷ್ಟಿ ಮತ್ತು ನೆರೆಯಿಂದ ತತ್ತರಿಸಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.