1 ಲಕ್ಷ ರೂ. ಬೆಳೆ ಹಾನಿಗೆ 1,350 ರೂ. ಬಿಡುಗಡೆ- ಚೆಕ್ ನೋಡಿ ಕಂಗಾಲಾದ ರೈತ

Public TV
1 Min Read
former

ಮಂಡ್ಯ: 2.20 ಎಕರೆ ಬಾಳೆ ಬೆಳೆ ಹಾನಿಯಾಗಿದ್ದಕ್ಕೆ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಜಯ ಹೊಸಹಳ್ಳಿ ಗ್ರಾಮದ ರೈತರೊಬ್ಬರಿಗೆ ಪರಿಹಾರದ ಹಣವೆಂದು ತಹಶೀಲ್ದಾರ್ 1,350 ರೂ. ಚೆಕ್ ನೀಡಿದ್ದಾರೆ.

40 ವರ್ಷದ ರೈತ ಸಿದ್ದಲಿಂಗೇಗೌಡರು 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಒಂದು ಎಕರೆ ಬೆಳೆ ಸಂಪೂರ್ಣ ನಾಶವಾಗಿತ್ತು. 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಳೆ ಬೆಳೆ ನಾಶವಾಗಿತ್ತು. ಅಂದು ಸಂಬಂಧಪಟ್ಟ ಅಧಿಕಾರಿಗಳು ನಾಶವಾಗಿದ್ದ ಬೆಳೆ ವೀಕ್ಷಣೆ ಮಾಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು.

former 2

ಪ್ರಕೃತಿ ವಿಕೋಪದಿಂದ ನಾಶವಾಗಿದ್ದ ಬೆಳೆಗೆ ಕೇವಲ 1,350 ರೂಪಾಯಿಗಳನ್ನು ಪರಿಹಾರದ ಹಣ ಎಂದು ಕೆ.ಆರ್.ಪೇಟೆ ತಹಶೀಲ್ದಾರ್ ನೀಡಿದ್ದಾರೆ. ಪರಿಹಾರ ಹಣದ ಚೆಕ್ ನೋಡಿ ರೈತ ಸಿದ್ದಲಿಂಗೇಗೌಡ ದಿಕ್ಕು ತೋಚದಂತಾಗಿದ್ದಾರೆ.

ನಾನು ಸಾಲ ಮಾಡಿ ಬೆಳೆದಿದ್ದ ಬೆಳೆ ಪ್ರಕೃತಿ ವಿಕೋಪದಿಂದ ನಾಶವಾಗಿದೆ. ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಕೇವಲ 1,350 ರೂ.ಗಳ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ನನಗೆ ನೀಡಿದ್ದ ಚೆಕ್ ತಹಶೀಲ್ದಾರರಿಗೆ ಮರಳಿ ನೀಡಿದ್ದೇನೆ. ಹೆಚ್ಚಿನ ಪರಿಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article