– ಇನ್ನೂ ಎರಡು ದಿನ ಮಳೆ ಸಾಧ್ಯತೆ
– ಕೋಟ್ಯಂತರ ಮೌಲ್ಯದ ಬೆಳೆ ನಾಶ
ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬೆಂಗಳೂರು, ಮೈಸೂರು, ಚಿತ್ರದುರ್ಗ, ರಾಮನಗರ ಸೇರಿದಂತೆ ಇಂದು ಕೂಡ ಮಳೆಯಾಗಿದೆ. ಯಾದಗಿರಿಯಲ್ಲಿ ಕೇವಲ ಬಿರುಗಾಳಿಗೆ ಮನೆಯ ಶೀಟ್‍ಗಳು ಹಾರಿ ಹೋಗಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹುಟ್ಟಿಕೊಂಡಿರುವ ಫನಿ ಚಂಡಮಾರುತ ಒಡಿಶಾ ಸಮುದ್ರತೀರವನ್ನು ಪ್ರವೇಶಿಸಿದೆ. ಬಂಗಾಳಕೊಲ್ಲಿಯ ಈಶಾನ್ಯದಿಂದ 950 ಕಿಲೋಮೀಟರ್ ದೂರದಿಂದ ಚಂಡಮಾರುತ ಸಾಗಿ ಬರಲಿದೆ. ಹೀಗಾಗಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ, ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಎಫೆಕ್ಟ್‍ಗೆ ರಾಜ್ಯದಲ್ಲೂ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆಗೆ ಬಾಳೆ, ಕಬ್ಬು, ತೆಂಗು, ಅರಿಶಿಣ ಮತ್ತಿತ್ತರ ಬೆಳೆಗಳು ನಾಶಗೊಂಡು ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದ ಗುಳ್ಳದಪುರ ಗ್ರಾಮದಲ್ಲಿ ಗಾಳಿಗೆ ಕೋಳಿ ಫಾರಂ ಹಾಗೂ ಕುರಿ ಫಾರಂ ಧ್ವಂಸವಾಗಿದೆ. ದಾವಣಗೆರೆ ಜಿಲ್ಲೆಯ ಎಲೆ ಬೇತೂರು, ಪುಟುಗ್ನಾಳ್ ಗ್ರಾಮದಲ್ಲಿ ತೆಂಗು, ಅಡಕೆ ಮರಗಳು ನೆಲಸಮವಾಗಿದ್ದು, ಹತ್ತಾರು ಮನೆಗಳ ಮೇಲ್ಫಾವಣಿಗಳು ಹಾರಿಹೋಗಿವೆ. ಕೊಡಗಿನ ಕುಶಾಲನಗರದ ಕೆಇಬಿ ಮಂಟಿಯ ಮನೆಯೊಂದರ 30 ಶೀಟುಗಳು ಗಾಳಿಗೆ ಹಾರಿ ಪುಡಿಪುಡಿಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಮೂವರು ಗಾಯಗೊಂಡಿದ್ದಾರೆ.
ಮೈಸೂರಿನಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಸಮಯ ಎಡಬಿಡದೆ ಮಳೆ ಸುರಿದಿದೆ. ದಿಢೀರ್ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡು, ವಾಹನ ಸವಾರರು ಪರದಾಡುವಂತಾಯಿತು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ಶ್ರೀಪಾರ್ಥಲಿಗೇಶ್ವರ ದೇವಸ್ಥಾನದ ಬಳಿಯ ತೆಂಗಿಮರಕ್ಕೆ ಬೆಂಕಿ ಸಿಡಿಲು ಬಡಿದಿದೆ. ಪರಿಣಾಮ ತೆಂಗಿನ ಮರ ಹೊತ್ತಿ ಉರಿದಿದೆ. ಅಷ್ಟೇ ಅಲ್ಲದೆ ದೇವಸ್ಥಾನದ ಗೋಪುರದಲ್ಲಿರುವ ಬಸವಣ್ಣನ ಮೂರ್ತಿಯ ತಲೆ ಭಾಗ ಪುಡಿ ಪುಡಿಯಾಗಿದೆ.
ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಮಳೆರಾಯ ಇಂದು ತಂಪನ್ನೆರೆದಿದ್ದಾನೆ. ರಾಮನಗರ, ಮಾಗಡಿ, ಚನ್ನಪಟ್ಟಣ ಸೇರಿದಂತೆ ವಿವಿಧೆಡೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಗುಡುಗು, ಸಿಡಿಲು, ಗಾಳಿ ಸಹಿತ ಜೋರು ಮಳೆಯಾಗಿದೆ. ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಯ ಜನರು ಇಂದು ಸುರಿದ ಮಳೆಯಿಂದ ಖುಷಿಯಾಗಿದ್ದಾರೆ. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಷ್ಟೇ ಅಲ್ಲದೇ ವಾಹನ ಸವಾರರು ರಸ್ತೆಯಲ್ಲಿ ನಿಂತ ಮಳೆ ನೀರಿನಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಟೌನ್ ಹಾಲ್, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಎರಡು ದಿನಗಳ ಕಾಲ ಬೆಂಬಿಡದೇ ವರುಣ ಕಾಡಲಿದ್ದಾನೆ ಎಂದು ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ಮತ್ತು ಪ್ರಾಕೃತಿ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.