ಚಿತ್ರದುರ್ಗ: ಬೆಳೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.
ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇದರ ಪರಿಹಾರ ಮೊತ್ತವನ್ನು ಸರ್ಕಾರ ಇನ್ನೂ ನೀಡಿಲ್ಲ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕಚೇರಿ ಬಳಿ ರೈತ ಚಿಕ್ಕಣ್ಣ ಕುಟುಂಬ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಅವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಬರುವವರೆಗೆ ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.
Advertisement
Advertisement
ಕಚೇರಿಗೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಅವರ ಟೇಬಲ್ ಮೇಲೆ ವಿಷದ ಬಾಟಲಿ ಇಟ್ಟು ಅಳಲು ತೋಡಿಕೊಂಡರು. ಮಹಾಮಳೆಗೆ 2 ಎಕರೆಯಲ್ಲಿ ಬೆಳೆದಿದ್ದ ಸುಮಾರು 50 ತೆಂಗಿನ ಮರಗಳು ಹಾನಿಯಾಗಿದ್ದು, ಬುಡಸಮೇತಕೊಚ್ಚಿ ಹೋಗಿವೆ. ಘಟನೆ ನಡೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರಿಟ್ಟರು. ಶೀಘ್ರದಲ್ಲೇ ಬೆಳೆ ಪರಿಹಾರ ಬಿಡುಗಡೆ ಮಾಡಿ ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಗೆ ಎಚ್ಚರಿಸಿದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, 5,900 ರೂ.ಗಳನ್ನು ತಾತ್ಕಲಿಕ ಪರಿಹಾರ ನೀಡಲಾಗಿದೆ. ಆದರೆ ರೈತರ ಮನವಿ ಮೇರೆಗೆ ಹೊಸದುರ್ಗ ತಹಶೀಲ್ದಾರ್ ಅವರಿಂದ ವರದಿ ಪಡೆದು ಹೆಚ್ಚಿನ ಪರಿಹಾರಕ್ಕಾಗಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement
ಜಿಲ್ಲೆಯ ಹೊಸದುರ್ಗ ತಾಲೂಕಿನಾದ್ಯಂತ ಸುರಿದ ಮಹಾಮಳೆಯಿಂದಾಗಿ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ 40ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ಫಲಕ್ಕೆ ಬಂದಿದ್ದ ಅಡಿಕೆ, ದಾಳಿಂಬೆ ಹಾಗು ಮೆಕ್ಕೆಜೋಳ ನೀರಲ್ಲಿ ಕೊಚ್ಚಿ ಹೋಗಿತ್ತು. ಇದರಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ಆಲಿಸಲು ತಾಲೂಕಿಗೆ ಭೇಟಿ ನೀಡುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ನೀಡಿಲ್ಲ. ಇತ್ತ ಜಿಲ್ಲಾಡಳಿತ ಸಹ ಬೆಳೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿದ್ದು, ಕೇವಲ 5,949 ರೂ. ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ. ಈ ಬಗ್ಗೆ ಹಲವು ಬಾರಿ ಶಾಸಕ ಗೂಳಿಹಟ್ಟಿಶೇಖರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಹೀಗಾಗಿ ರೈತರು ಪ್ರತಿಭಟನೆ ನಡೆಸಿದರು.