ನವದೆಹಲಿ: ದ್ರಾಕ್ಷಿ ಬೆಳೆಗೆ ನೀಡುವ ಬೆಳೆ ವಿಮೆಯನ್ನು ಒಣದ್ರಾಕ್ಷಿ ಕೃಷಿಕರಿಗೂ ವಿಸ್ತರಿಸಬೇಕು, ಒಣ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಜೊತೆಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ರಾಜ್ಯ ಒಣದ್ರಾಕ್ಷಿ ಬೆಳೆಗಾರರ ನಿಯೋಗ ಸಂಸದ ಈರಣ್ಣ ಕಡಾಡಿ ನೇತೃತ್ವದಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಮಾಜಿ ಶಾಸಕ ಶಹಜಾನ್ ಡೊಂಗರಗಾವ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ದೆಹಲಿಗೆ ಆಗಮಿಸಿದ್ದ ನಿಯೋಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಹೆಚ್.ಡಿ ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಭೇಟಿಯಾಗಿ ಮನವಿ ಮಾಡಿದರು.
ಭೇಟಿ ಬಳಿಕ ಮಾತನಾಡಿದ ಶಹಜಾನ್ ಡೊಂಗರಗಾವ್, ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ, ರಾಜ್ಯ ಮಾತ್ತವಲ್ಲದೇ ದೇಶದ್ಯಾಂತ ಒಣದ್ರಾಕ್ಷಿ ಬೆಳಗಾರರು ಸಂಕಷ್ಟದಲ್ಲಿದ್ದಾರೆ. ದ್ರಾಕ್ಷಿ ಬೆಳೆಗಾರರಿಗೆ ಬೆಳೆ ವಿಮೆ ಸಿಗುತ್ತಿದೆ. ಆದರೆ, ಅದು ಒಣದ್ರಾಕ್ಷಿಗೆ ಅನ್ವಯ ಆಗಲ್ಲ.
ಹವಮಾನ ವೈಪರೀತ್ಯಗಳಿಂದ ಒಣ ದ್ರಾಕ್ಷಿ ಕೃಷಿಯಲ್ಲಿ ಸಾಕಷ್ಟು ಸವಾಲುಗಳಿವೆ. ರೈತರು ನಷ್ಟಕ್ಕೊಳಗಾಗುವ ಸಾಧ್ಯತೆಗಳಿದೆ ಎಲ್ಲ ಸವಾಲುಗಳ ನಡುವೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗೀ ಬೆಳೆ ವಿಮೆ ಒಣದ್ರಾಕ್ಷಿಗೂ ಮುಂದುವರಿಸಬೇಕು, ಹಾಗೂ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 250 ರೂ. ಬೆಂಬಲ ಬೆಲೆ ನೀಡಬೇಕು ಎಂದು ಹೇಳಿದರು.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಅಧಿಕಾರಗಳ ಜೊತೆಗೆ ಚರ್ಚೆ ಮಾಡುವ ಭರವಸೆ ನೀಡಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಅವರು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ ಎಂದು ಶಹಜಾನ್ ಡೊಂಗರಗಾವ್ ತಿಳಿಸಿದರು.