ಗಾಂಧಿನಗರ: ಆಸ್ಟ್ರೇಲಿಯಾದ ಅನೇಕ ಕಡೆಯ ಮನೆಗಳಲ್ಲಿ ಅಪಾಯಕಾರಿ ಸರಿಸೃಪಗಳು ಬರುವುದು ಹೊಸದೆನಲ್ಲ. ಆದರೆ ನಮ್ಮ ದೇಶದಲ್ಲಿ ಮನೆಯ ಒಳಗೆ ಮೊಸಳೆಗಳು ಕಾಣಿಸಿಕೊಳ್ಳವುದು ಅಪರೂಪ. ಆದರೆ ಗುಜರಾತ್‌ನಲ್ಲಿ ಮನೆಯ ಬಾತ್ ರೂಂನಲ್ಲೇ ಮೊಸಳೆ ಕಾಣಿಸಿಕೊಳ್ಳುವ ಮೂಲಕ ಮಾಲೀಕನನ್ನು ಹೌಹಾರಿಸಿದೆ.
ಗುಜರಾತಿನ ವಡೋದರಾ ನಿವಾಸಿ ಮಹೇಂದ್ರ ಪಡಿಯಾರ್ ಮಧ್ಯರಾತ್ರಿ ನಂತರ ತನ್ನ ಸ್ನಾನ ಗೃಹದಲ್ಲಿ ದೊಡ್ಡ ಶಬ್ದವಾಗಿದ್ದಕ್ಕೆ ಎಚ್ಚರವಾಗಿದ್ದಾರೆ. ಬೆಕ್ಕು ಇರಬಹುದು ಎಂದು ಬಾತ್ ರೂಂ ಬಾಗಿಲು ತೆರೆದಿದ್ದಾರೆ. ಬಾತ್ ರೂಂ ತೆರೆದ ತಕ್ಷಣ ಮೊಸಳೆ ಅವರನ್ನು ದಿಟ್ಟಿಸಿ ನೋಡುತ್ತಿರುವುದನ್ನು ಕಂಡು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.
ಮಹೇಂದ್ರ ಅವರು ಈ ಕುರಿತು ಪ್ರತಿಕ್ರಿಯಿಸಿ, ಮೊಸಳೆ ನಾಲ್ಕು ಅಡಿ ಇತ್ತು, ಬಾತ್ ರೂಂ ಬಾಗಿಲು ತೆರೆಯುತ್ತಿದ್ದಂತೆ ಬಾಯಿ ತೆರೆದು ನನ್ನತ್ತ ನೋಡಿತು. ಆಗ ನನಗೆ ಆಘಾತವಾಯಿತು. ತಕ್ಷಣವೇ ವನ್ಯಜೀವಿ ರಕ್ಷಣಾ ಸಂಸ್ಥೆಗೆ ಕರೆ ಮಾಡಿದೆ. ಅವರು ನಸುಕಿನ ಜಾವ 2.45ಕ್ಕೆ ನಮ್ಮ ಮನೆಗೆ ಆಗಮಿಸಿದರು. ನಂತರ ಮೊಸಳೆಯನ್ನು ಹಿಡಿದುಕೊಂಡು ತೆರಳಿದರು ಎಂದು ವಿವರಿಸಿದ್ದಾರೆ. ಮೊಸಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವ್ಯನ್ಯಜೀವಿ ರಕ್ಷಣಾ ಸಂಸ್ಥೆಯ ಸದಸ್ಯ ಮಾತನಾಡಿ, ನಮಗೆ ಪಡಿಯಾರ್‌ನಿಂದ ಕರೆ ಬಂತು. ನಂತರ 2.45ಕ್ಕೆ ಸ್ಥಳ ತಲುಪಿದೆವು. ಕತ್ತಲಾಗಿದ್ದರಿಂದ ಸರಿಸೃಪವನ್ನು ರಕ್ಷಿಸುವುದು ಸ್ವಲ್ಪ ಕಷ್ಟವಾಯಿತು. ಅಲ್ಲದೆ ಮೊಸಳೆ ಆಕ್ರಮಣಕಾರಿಯಾಗಿತ್ತು ಎಂದು ತಿಳಿಸಿದರು.
ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ, ಮೊಸಳೆಯನ್ನು ಮಹೇಂದ್ರ ಮನೆಯಿಂದ ರಕ್ಷಿಸಲಾಗಿದೆ. ವಿಶ್ವಮಿತ್ರಿ ನದಿಯಿಂದ ಈ ಮೊಸಳೆ ಬಂದಿರಬಹುದು ಎಂದು ಶಂಕಿಸಿದರು. ವಿಶ್ವಮಿತ್ರಿ ನದಿಯು ನೂರಾರು ಸರೀಸೃಪಗಳ ನೆಲೆಯಾಗಿದೆ. ಅವು ಆಗಾಗ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುತ್ತವೆ.
ಆಗಸ್ಟ್ ತಿಂಗಳಲ್ಲಿ ವಡೋದರಾದಲ್ಲಿ ಪ್ರವಾಹ ಸಂಭವಿಸಿದಾಗ, ಜಲಾವೃತವಾಗಿದ್ದ ಬೀದಿಯಲ್ಲಿ ಮೊಸಳೆಯೊಂದು ನಾಯಿಯ ಮೇಲೆ ದಾಳಿ ನಡೆಸಿತ್ತು. ಈ ವಿಡಿಯೋ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿತ್ತು.