ಬಾಗಲಕೋಟೆ: ಈ ವರ್ಷ ಭೀಕರ ಬರಗಾಲದಿಂದಾಗಿ ಕೃಷ್ಣಾ ನದಿ ಬತ್ತಿಹೋಗಿದ್ದು ಜಲಚರ ಪ್ರಾಣಿಗಳು ಮೃತಪಡುತ್ತಿವೆ. ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದಲ್ಲಿ ಮೊಸಳೆಯೊಂದು ಆಹಾರವಿಲ್ಲದೇ ಸಾವನ್ನಪ್ಪಿದೆ.
ಬರಗಾಲದಿಂದಾಗಿ ಕೃಷ್ಣನದಿಯಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಮೊಸಳೆಗಳೆಲ್ಲ ನದಿಯಿಂದ ಹೊರ ಬರುತ್ತಿವೆ. ಈ ಹಿಂದೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಕೊರ್ತಿ ಗ್ರಾಮದಿಂದ ವಿಜಯಪುರ ನಗರಕ್ಕೆ ನೀರು ಸರಬರಾಜಿಗಾಗಿ ಪೈಪ್‍ಗಳನ್ನು ಅಳವಡಿಸಿದ್ದರು. ಇದರಿಂದಾಗಿ ಕೊರ್ತಿ ಗ್ರಾಮದ ಬಳಿಯಲ್ಲಿ ನದಿಯ ನೀರು ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರು ಸಾವನ್ನಪ್ಪಿದ ಮೊಸಳೆಯ ಮುಂದೆ ಕುಳಿತು ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರ ಹೆಸರಿನಲ್ಲಿ ಬೊಬ್ಬೆ ಹೊಡೆದುಕೊಂಡರು. ನಂತರ ಮೊಸಳೆಯ ಅಂತಿಮ ಸಂಸ್ಕಾರ ನೆರವೇರಿಸಿದರು. ಮೊಸಳೆಯ ಅಂತಿಮ ಸಂಸ್ಕಾರ ನೆರವೇರಿಸಿದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.